ಜಾತಿ ಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ
ಜಾತಿ ಗಣತಿ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹೈಕಮಾಂಡ್‌ನ ಸೂಚನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮರು ಸಮೀಕ್ಷೆಯ ಮೂಲಕ ರಾಜ್ಯದ ಜಾತಿ ಆಧಾರಿತ ಜನಸಂಖ್ಯಾ ವಿವರಗಳನ್ನು ರಾಜ್ಯ ಸರ್ಕಾರ ಪಡೆಯಲಿದೆ.

ಬೆಂಗಳೂರು, ಜೂನ್ 12: ಜಾತಿ ಗಣತಿ ಮರು ಸಮೀಕ್ಷೆಗೆ (Caste Census Re-Survey) ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಜಾತಿ ಗಣತಿ ಮರು ಸಮೀಕ್ಷೆ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಜೂ.12) ವಿಶೇಷ ಸಚಿವ ಸಂಪುಟ ಸಭೆ (Cabinet Meeting) ನಡೆಯಿತು. ಈ ಸಂಪುಟ ಸಭೆಯಲ್ಲಿ ಜಾತಿ ಗಣತಿ ಮರು ಸಮೀಕ್ಷೆ ನಡೆಸಲು ಎಲ್ಲ ಸಚಿವರು ಒಪ್ಪಿಗೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ ಕುರಿತು ಚರ್ಚಿಸಿದ್ದೇವೆ. 2011ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಬಗ್ಗೆ ಸರ್ವೆ ನಡೆಸಲಾಗಿತ್ತುನಡೆಸಿದ್ದೆವು. 54 ಮಾನದಂಡಗಳು ಇಟ್ಟುಕೊಂಡು ಮನೆ ಮನೆಗೆ ಹೋಗಿ ಸರ್ವೆ ಮಾಡಿರುವ ವರದಿ ಪಡೆದಿದ್ದೇವೆ. 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.11 ಕೋಟಿ ಇದೆ ಎಂದು ಹೇಳಿದರು.
2015ರಲ್ಲಿ 6.35 ಕೋಟಿ ಜನಸಂಖ್ಯೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸರ್ವೆ ಆಗಿದ್ದು 5.98 ಕೋಟಿ ಜನರದ್ದು. 2015ರ ಏಪ್ರಿಲ್ 11ರಂದು ಜಾತಿಗಣತಿ ಸರ್ವೆ ಆರಂಭಿಸಿದೆ. 2025ರ ನವೆಂಬರ್ 30ರಂದು ಸರ್ವೆ ಮುಕ್ತಾಯಗೊಂಡಿತ್ತು. 1.60 ಲಕ್ಷ ಸಿಬ್ಬಂದಿ ಜಾತಿಗಣತಿ ಸರ್ವೆಯಲ್ಲಿ ಭಾಗಿಯಾಗಿದ್ದರು ಎಂದರು.
2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿತು. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದರು. ಅಂದು ಹಿಂದುಳಿದ ವರ್ಗಗಳ ಮಂತ್ರಿ ಪುಟ್ಟರಂಗಶೆಟ್ಟಿ ಆಗಿದ್ದರು. ಆಗ ಜಾತಿಗಣತಿ ವರದಿ ಪೂರ್ಣಗೊಂಡಿತ್ತು. ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರು ವರದಿ ಸ್ವೀಕರಿಸುವಂತೆ ಅಧ್ಯಕ್ಷ ಕಾಂತರಾಜುಗೆ ಮನವಿ ಮಾಡಿದ್ದರು. ಹೆಚ್ಡಿ ಕುಮಾರಸ್ವಾಮಿ ವರದಿ ಸ್ವೀಕಾರ ಮಾಡಬೇಡಿ ಅಂತ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿ ಜನಗಣತಿ ಮರು ಸರ್ವೇಗೆ ಕಾರಣಗಳೇನು? ಅಚ್ಚರಿ ಮೂಡಿಸಿದ ಕೈ ಹೈಕಮಾಂಡ್ ನಿರ್ಧಾರ..!
ಕಾಂತರಾಜು ಸರ್ವೆಯ ದತ್ತಾಂಶ ಪಡೆದು ಜಯಪ್ರಕಾಶ್ ಹೆಗ್ಡೆ ಅವರು ಶಿಫಾರಸು ಮಾಡಿದರು. 2024ರ ಫೆ.29ರಂದು ಸರ್ಕಾರಕ್ಕೆ ಜಯಪ್ರಕಾಶ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಪಾರ್ಲಿಮೆಂಟ್ ಚುನಾವಣೆ ಕಾರಣದಿಂದ ವರದಿ ಚರ್ಚಿಸಲಿಲ್ಲ. ಬಳಿಕ ಸರ್ಕಾರ ವರದಿ ತೆಗೆದುಕೊಂಡು 2025 ರಲ್ಲಿ ಕ್ಯಾಬಿನೆಟ್ ಮುಂದೆ ಮಂಡಿಸಿದ್ದೇವೆ. ಸಚಿವರು ಅವರ ಅಭಿಪ್ರಾಯ ಕೊಟ್ಟಿದ್ದಾರೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Thu, 12 June 25








