ಜಾತಿ ಜನಗಣತಿ ಮರು ಸರ್ವೇಗೆ ಕಾರಣಗಳೇನು? ಅಚ್ಚರಿ ಮೂಡಿಸಿದ ಕೈ ಹೈಕಮಾಂಡ್ ನಿರ್ಧಾರ..!
ಸಾಮಾಜಿಕ ಆರ್ಥಿಕ ಸಮೀಕ್ಷೆಯ ಜಾತಿ ಗಣತಿ ವರದಿ.. ಕರ್ನಾಟಕದಲ್ಲಿ ಕಿಚ್ಚುಹೊತ್ತಿಸಿದ್ದ ವರದಿ.. ಪ್ರಬಲ ಸಮುದಾಯಗಳು ಸಿಡಿದೇಳುವಂತೆ ಮಾಡಿದ್ದ ವರದಿ. ಕೆಲ ಹಿಂದುಳಿದ ಸಮುದಾಯಗಳ ಕೆಂಗಣ್ಣಿಗೂ ಗುರಿಯಾಗಿದ್ದ ವರದಿ. ಇದೇ ಜಾತಿಗಣತಿ ವರದಿ ಕುರಿತಂತೆ ಇದೀಗ ಮಹತ್ವದ ನಿರ್ಧಾರ ಹೊರಬಿದ್ದಿದೆ. 10ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದು ಹೊಸದೊಂದೂ ರಾಜಕೀಯ ಸಮರಕ್ಕೆ ನಾಂದಿಹಾಡಿದೆ.

ಬೆಂಗಳೂರು, (ಜೂನ್ 10): ರಾಹುಲ್ ಗಾಂಧಿ (Rahul Gandhi) ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ (Siddaramaiah), ಡಿಕೆಶಿ ಜೊತೆ ಎಐಸಿಸಿ ಕಚೇರಿಯಲ್ಲಿಂದು ಮಹತ್ವದ ಸಭೆ ನಡೀತು. ಸಭೆಯಲ್ಲಿ ಕಾಲ್ತುಳಿತ ಘಟನೆ ಜೊತೆ ಸಂಪುಟ ಸರ್ಜರಿ ಬಗ್ಗೆಯೂ ಚರ್ಚೆ ನಡೀತು ಎನ್ನಲಾಗಿದೆ. ಆದ್ರೆ ಪ್ರಮುಖ ವಾಗಿ ಜಾತಿಗಣತಿ (caste census) ವಿಚಾರ ಸದ್ದು ಮಾಡಿದೆ. ವಿವಾದಕ್ಕೆ ಗುರಿಯಾಗಿರುವ ಹಾಲಿ ಜಾತಿಗಣತಿ ವರದಿಗೆ ಬ್ರೇಕ್ ಹಾಕಲು ಹೈಕಮಾಂಡ್ ಸೂಚಿಸಿದ್ದು, ಮರು ಸರ್ವೇ (caste census resurvey) ಮಾಡುವಂತೆ ತಿಳಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಗೆ ಸೂಚಿಸಿದ್ದು, ಮತ್ತೆ ಮರು ಜಾತಿ ಗಣತಿ ಸಮೀಕ್ಷೆ ಮಾಡಿಸುವುದಾಗಿ ಘೋಷಣೆ ಮಾಡಿದ್ದಾರೆ. ಮಠಾಧೀಶರು, ಪ್ರಬಲ ಸಮುದಾಯಗಳ ವಿರೋಧ ಬೆನ್ನಲ್ಲೇ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಅಚ್ಚರಿಕೆ ಕಾರಣವಾಗಿದೆ.
ಜಾತಿ ಗಣತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ಮಹತ್ವದ ಸೂಚನೆ ನೀಡಿದೆ. ಕಾಲಮಿತಿಯಲ್ಲಿ ಮರು ಗಣತಿ ಮಾಡಲು ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟಿದೆ. ರಾಜ್ಯ ಸರ್ಕಾರದ ಮಹತ್ವದ ಜಾತಿ ಗಣತಿ ವರದಿಯ ಅಂಕಿ- ಅಂಶಗಳ ಬಗ್ಗೆ ಕೆಲವು ಪ್ರಭಾವಿ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು. ಅಂಕಿ ಸಂಖ್ಯೆಗಳ ಕುರಿತಂತೆ ಕೆಲ ಹಿಂದುಳಿದ ಸಮುದಾಯಗಳಿಂದಲೂ ಆಕ್ಷೇಪ ಹೊರಹಾಕಿದ್ವು. ಇದಲ್ಲದೆ ಜಾತಿಗಣತಿ 10 ವರ್ಷ ಹಳೆಯದಾದ ಕಾರಣ ಇದಕ್ಕೂ ಅಪಸ್ವರ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮರು ಜಾತಿಗಣತಿಗೆ ಹೈಕಮಾಂಡ್ ಸೂಚಿಸಿದೆ. ಈ ನಿಟ್ಟಿನಲ್ಲಿ ಗುರುವಾರ ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ಜನಗಣತಿ ಮರು ಸರ್ವೇ: ಹೈಕಮಾಂಡ್ ಸಭೆ ಬಳಿಕ ಸಿದ್ದರಾಮಯ್ಯ ಮಹತ್ವದ ಘೋಷಣೆ
ಸ್ವಪಕ್ಷದವರ ವಿರೋಧವನ್ನು ಲೆಕ್ಕಿಸದೆ ಕಳೆದ ಏಪ್ರಿಲ್ 11ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಮಂಡಿಸಲಾಗಿತ್ತು. ಮುಸ್ಲಿಂಮರನ್ನು ನಂಬರ್ 1 ಜನಸಂಖ್ಯೆ ಎಂದು ತೋರಿಸಿ.. ಪರಿಶಿಷ್ಟ ಸಮುದಾಯವನ್ನು ನಂಬರ್ 2 ಎಂದು ತೋರಿಸಲಾಗಿತ್ತು. ಒಕ್ಕಲಿಗ, ಲಿಂಗಾಯತ ಸಮುದಾಯ ಇದ್ರ ವಿರುದ್ಧ ಸಿಡಿದೆದ್ದು, ಜಾತಿಗಣತಿ ವರದಿ ಜಾರಿಯಾದ್ರೆ ಸರ್ಕಾರವೇ ಬಿದ್ದೋಗಲಿದೆ ಅಂತಾ ಎಚ್ಚರಿಕೆ ನೀಡಿದ್ವು. ಪ್ರತಿಭಟನೆಗೆ ಬೆಚ್ಚಿಬಿದ್ದಿದ್ದ ಸರ್ಕಾರ ಜಾತಿಗಣತಿ ವರದಿ ಜಾರಿಯನ್ನು ಮುಂದೂಡಿತ್ತು.
ಕೇಂದ್ರದ ಮೋದಿ ಸರ್ಕಾರ ಇತ್ತೀಚಿಗಷ್ಟೇ, ಜನಗಣತಿ ಜೊತೆ ದೇಶಾದ್ಯಂತ ಜಾತಿಗಣತಿಗೂ ನಿರ್ಧಾರ ಕೈಗೊಂಡಿತ್ತು. ಆದ್ರೆ, ಇದೀಗ ಮಹತ್ವದ ಬೆಳವಣಿಗೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 10ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದು ಹೊಸದೊಂದೂ ರಾಜಕೀಯ ಸಮರಕ್ಕೆ ನಾಂದಿಹಾಡಿದೆ.
ಮರು ಸರ್ವೇಗೆ ಕಾರಣಗಳೇನು?
ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದು ಮರು ಸರ್ವೇಗೆ ಮುಂದಾಗಿದೆ. ಅಂದ್ರೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕರ್ನಾಟಕದ ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ಜಾತಿ ಗಣತಿಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ಹಳೆಯ ಜಾತಿ ಜನಗಣತಿ ಸರ್ವೇಯಲ್ಲಿ ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಇತ್ತು. ಇದು ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ 2 ಸಮುದಾಯಗಳ ಅಸಮಾಧಾನ ತಣಿಸಲು ಇದೀಗ ಹೊಸ ಸರ್ವೇ ಮಾಡಲಾಗುತ್ತಿದೆ. ಇನ್ನು ಮುಂದೆ ಸ್ಥಳೀಯ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತಬೀಳುವ ಸಾಧ್ಯತೆ ಭಯದಿಂದ ಹೈಕಮಾಂಡ್ ಹಳೆ ಜಾತಿ ಗಣತಿ ವರದಿಗೆ ಬ್ರೇಕ್ ಹಾಕಿ ಎನ್ನಲಾಗಿದೆ.
ಸಿದ್ದರಾಮಯ್ಯಗೆ ಹಿನ್ನಡೆ
ಸಿಎಂ ಸಿದ್ದರಾಮಯ್ಯನವರು ಹಳೆಯ ಜಾತಿಗಣತಿಯನ್ನೇ ಯಥಾವತ್ತಾಗಿ ಶತಾಯಗತಾಯ ಜಾರಿಗೊಳಿಸಲು ಮುಂದಾಗಿದ್ದರು. ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಸ್ವಪಕ್ಷದ ಘಟಾನುಘಟಿ ನಾಯಕರು, ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳ ವಿರೋಧದ ನಡುವೆಯೂ ಸಿದ್ದರಾಮಯ್ಯ, 10ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನೇ ಜಾರಿಗೆ ತರಲು ಕಸರತ್ತು ನಡೆಸಿದ್ದರು. ಆದ್ರೆ, ಇದೀಗ ಸಿಎಂಗೆ ಬ್ರೇಕ್ ಹಾಕಲಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯಗೆ ಒಂದು ರೀತಿಯಲ್ಲಿ ಹಿನ್ನಡೆಯಾದಂತಾಗಿದೆ.
ಇನ್ನು ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿ ಒಕ್ಕಲಿಗ, ಲಿಂಗಾಯತ ನಾಯಕರ ಒತ್ತಡಕ್ಕೆ ಜಯ ಸಿಕ್ಕಿದೆ. ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿ ಬರೆದ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹಿ ಹಾಕಿದ್ರು. ವೀರಶೈವ ಲಿಂಗಾಯತ ಮಹಾಸಭಾದಿಂದ ಮೊದಲಿನಿಂದಲೂ ಹಳೇ ಸರ್ವೇಗೆ ವಿರೋಧ ಇತ್ತು. ರಾಜ್ಯ ಒಕ್ಕಲಿಗರ ಸಂಘ ಕೂಡ ಹಳೇ ಸರ್ವೇಯನ್ನು ತೀವ್ರವಾಗಿ ವಿರೋಧಿಸಿತ್ತು. ಈಗ ಈ ಪ್ರಬಲ ಸಮುದಾಯಗಳ ಒತ್ತಾಯ, ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ.
ಒಟ್ಟಿನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 10ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದು ಹೊಸದೊಂದೂ ರಾಜಕೀಯ ಸಮರಕ್ಕೆ ನಾಂದಿಹಾಡಿದೆ.