ಜಾತಿ ಗಣತಿ ವಿರುದ್ಧ ಸಿಡಿದೆದ್ದ ಒಕ್ಕಲಿಗರು, ಲಿಂಗಾಯತರು: ವರದಿ ಜಾರಿಯಾದರೆ ಸರ್ಕಾರ ಬೀಳಿಸುವ ಎಚ್ಚರಿಕೆ
ಸರ್ಕಾರದ ಜಾತಿ ಗಣತಿ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುವ ಮಹಾ ಮುನ್ಸೂಚನೆ ಸಿಕ್ಕಿದೆ. ಜಾತಿ ಗಣತಿ ವಿರುದ್ಧ ಸಿಡಿದೆದ್ದಿರುವ ಒಕ್ಕಲಿಗರು ರಸ್ತೆಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಜತೆಗೆ, ಹೋರಾಟಕ್ಕೆ ಬನ್ನಿ ಎಂದು ಲಿಂಗಾಯತ ಸೇರಿದಂತೆ ಇತರ ಸಮುದಾಯಗಳಿಗೂ ಕರೆ ನೀಡಿದ್ದಾರೆ. ಮತ್ತೊಂದೆಡೆ, ಜಾತಿ ಗಣತಿ ವರದಿ ಜಾರಿ ಆಗದೇ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಶೋಷಿತ ಸಮುದಾಯದವರು ಗುಟುರು ಹಾಕುತ್ತಿದ್ದಾರೆ. ಸರ್ಕಾರಕ್ಕೆ ಈಗ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

ಬೆಂಗಳೂರು, ಏಪ್ರಿಲ್ 16: ಜಾತಿ ಗಣತಿ ವರದಿ (Caste Census Report) ಜಾರಿ ಆದರೆ ಸರ್ಕಾರವನ್ನೇ ಬೀಳಿಸುತ್ತೇವೆ ಎಂಬ ಎಚ್ಚರಿಕೆ ಒಂದು ಕಡೆ, ಜಾತಿ ಗಣತಿ ವಿರೋಧಿಸುವವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂಬ ಎಂಬ ಎಚ್ಚರಿಕೆ ಮಾತುಗಳು ಮತ್ತೊಂದೆಡೆ. ಜಾತಿ ಗಣತಿ ಎಂಬ ಜೇನುಗೂಡಿಗೆ ಕೈ ಹಾಕಿರುವ ಸರ್ಕಾರದ್ದು (Karnataka Govt) ಬಾಣಲೆಯಿಂದ ಬೆಂಕಿಗೆ ಬಿದ್ದಂಥ ಸ್ಥಿತಿ. ವರದಿ ಜಾರಿ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎಂಬ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ, ಇಷ್ಟು ದಿನ ಒಳಗೊಳಗೆ ಕೊತ ಕೊತನೇ ಕುದಿಯುತ್ತಿದ್ದ ಜಾತಿ ಗಣತಿ ಜ್ವಾಲಾಮುಖಿ ಇದೀಗ ಸ್ಫೋಟಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಜಾತಿ ಗಣತಿ ವಿರೋಧಿಸಿ ಒಕ್ಕಲಿಗರು ಮತ್ತು ಲಿಂಗಾಯತರು ಸಿಡಿದೆದ್ದಿದ್ದಾರೆ. ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಸಮರ ಘೋಷಿಸಿರುವ ರಾಜ್ಯ ಒಕ್ಕಲಿಗರ ಸಂಘ, ಹಿಂದೆಂದೂ ಕಾಣದ ರೀತಿಯಲ್ಲಿ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಘೋಷಿಸಿದೆ. ಇಷ್ಟೇ ಅಲ್ಲದೆ, ಲಿಂಗಾಯತ ಸಮುದಾಯದ ನಾಯಕರ ಬಳಿಯೂ ಜಂಟಿ ಹೋರಾಟ ಮಾಡುವ ಸಂಬಂಧ ಮಾತುಕತೆ ನಡೆಸಲು ಒಕ್ಕಲಿಗರ ಸಂಘ ಮುಂದಾಗಿದೆ.
ಎರಡು ದಿನ ಹಿಂದಷ್ಟೇ ‘ಟಿವಿ9’ ಜತೆ ಮಾತನಾಡಿದ್ದ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ನಾವು ಲಿಂಗಾಯತರದ್ದೇ ಪ್ರತ್ಯೇಕ ಜಾತಿ ಗಣತಿ ಮಾಡಿಸುತ್ತೇವೆ ಎಂದಿದ್ದರು. ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ, ನಾವೂ ಸಹ ನಮ್ಮ ಒಕ್ಕಲಿಗ ಸಮುದಾಯದ ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ ಎಂದಿದ್ದಾರೆ. ಜೊತೆಗೆ ತಮ್ಮ ಹೋರಾಟಕ್ಕೆ ಸಚಿವರು, ಶಾಸಕರು ಸಾಥ್ ನೀಡಬೇಕೆಂದು ಕೋರಿದ್ದಾರೆ.
ಜಾತಿ ಗಣತಿ ಜಾರಿ ಮಾಡಿದ್ರೆ ರಕ್ತಕ್ರಾಂತಿ ಎಂದ ಬಿಸಿ ಪಾಟೀಲ್
ಒಕ್ಕಲಿಗರ ಜೊತೆ ಸೇರಿ ಒಗ್ಗಟ್ಟಿನ ಹೋರಾಟದ ಬಗ್ಗೆ ವೀರಶೈವ ಲಿಂಗಾಯತ ಸಮುದಾಯ ತಮ್ಮ ನಿಲುವನ್ನು ಈವರೆಗೂ ತಿಳಿಸಿಲ್ಲ. ಆದರೆ, ಜಾತಿ ಗಣತಿ ಜಾರಿಗೆ ತಂದರೆ ರಕ್ತಕ್ರಾಂತಿ ಆಗಲಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಲಿಂಗಾಯತರನ್ನು 2 ಭಾಗ ಮಾಡುವುದು ಮಹಾ ಅಪರಾಧ ಎಂದಿದ್ದಾರೆ. ಇನ್ನು ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಸಹ ಜಾತಿ ಗಣತಿ ಬಗ್ಗೆ ಮಾತನಾಡಿದ್ದು, ನಾವೇನು ಜಾತಿ ಗಣತಿ ವಿರೋಧಿಸಲ್ಲ. ಅದು ಬಿಡುಗಡೆ ಆಗಲಿ. ಅದರ ಸಾಧಕ -ಬಾಧಕಗಳ ಬಗ್ಗೆ ಚಿಂತನೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯ ಜಾತಿ ಗಣತಿ ವರದಿಯ ವಿರುದ್ಧ ಸಿಟ್ಟಾಗಿದ್ದರೆ, ಇತ್ತ ಶೋಷಿತ ಸಮುದಾಯದ ಒಕ್ಕೂಟ ಹೋರಾಟಕ್ಕೆ ಸಿದ್ಧವಾಗಿದೆ. ಯಾರು ಜಾತಿ ಗಣತಿಯನ್ನು ವಿರೋಧಿಸುತ್ತಾರೋ ಅವರಿಗೆ ಪಾಠ ಕಲಿಸುತ್ತೇವೆ ಎಂದು ಗುಡುಗಿದೆ.
ಇನ್ನೊಂದೆಡೆ ಪ್ರಬಲ ಜಾತಿಯವರ ಒತ್ತಡಕ್ಕೆ ಮಣಿಯಬಾರದು. ಜಾತಿ ಗಣತಿ ವರದಿ ಜಾರಿಮಾಡಲೇ ಬೇಕು ಎಂದು ದಾವಣಗೆರೆಯಲ್ಲಿ, ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ವಿಜಯಪುರದಲ್ಲಿ ಅಹಿಂದ ಮುಖಂಡರು ಜಾತಿ ಗಣತಿ ವರದಿ ಜಾರಿ ಆಗದೇ ಇದ್ರೆ, ಹೋರಾಟ ಮಾಡುತ್ತೇವೆಂದು ಗುಡುಗಿದ್ದಾರೆ.
ನಮ್ಮನ್ನ ಎದುರಾಕಿಕೊಂಡು ರಾಜ್ಯಭಾರ ಮಾಡೋಕಾಗುತ್ತಾ?: ಶಾಮನೂರು ಶಿವಶಂಕರಪ್ಪ
ಜಾತಿ ಗಣತಿಗೆ ಗೊಲ್ಲ, ಯಾದವ ಸಮುದಾಯಗಳಿಂದಲೂ ವಿರೋಧ
ಈ ಎಲ್ಲಾ ಬೆಳವಣಿಗೆಗಳ ನಡುವೆ ಜಾತಿಗಣತಿಗೆ ಗೊಲ್ಲ, ಯಾದವರೂ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಗೊಲ್ಲ ಸಮುದಾಯದ ಸಂಖ್ಯೆ 30 ಲಕ್ಷಕಿಂತ ಹೆಚ್ಚು ಇದೆ. ಗೊಲ್ಲರು ಅತಿ ಹಿಂದುಳಿದ ವರ್ಗದಲ್ಲಿದ್ದಾರೆ. ಜಾತಿಗಣತಿ ವರದಿಯಲ್ಲಿ ಯಾದವರನ್ನು ಪ್ರವರ್ಗ-1ಬಿ ಗೆ ಸೇರಿಸಲಾಗಿದೆ. ಗೊಲ್ಲ ಮತ್ತು ಯಾದವರನ್ನ ಬೇರ್ಪಡಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಕಾನೂನು ತಜ್ಞ ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಸಹ ಜಾತಿ ಗಣತಿಯನ್ನು ಪ್ರಶ್ನೆ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಈ ವರದಿ ಅಸಿಂಧುವಾಗಲಿದೆ. ಸಮಾಜದಲ್ಲಿ ದ್ವೇಷ ಭಾವನೆ ಹೆಚ್ಚಾಗಲಿದ್ದು, ಜಾತಿಗಳು ಹೊಡೆದಾಡಿಕೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ ವರದಿ ಜಾರಿಗೆ ವಿರೋಧ: ಒಕ್ಕಲಿಗ, ವೀರಶೈವ ಲಿಂಗಾಯತ ಒಟ್ಟಿಗೆ ಹೋರಾಟ
ಜಾತಿ ಗಣತಿ ಜಾರಿ ಮಾಡದಂತೆ ಒಕ್ಕಲಿಗರು, ಲಿಂಗಾಯತರು ಸಿಡಿದೆದ್ದಿದ್ದರೆ, ಅತ್ತ ಹಿಂದುಳಿದ ಸಮುದಾಯದವರು ಜಾರಿ ಆಗಲೇ ಬೆಕೆಂದು ಒತ್ತಾಯಿಸಿದ್ದಾರೆ. ಈ ಪರ ವಿರೋಧವೇ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 am, Wed, 16 April 25