ಜಾತಿ ಗಣತಿ ವರದಿ ಜಾರಿಗೆ ವಿರೋಧ: ಒಕ್ಕಲಿಗ, ವೀರಶೈವ ಲಿಂಗಾಯತ ಒಟ್ಟಿಗೆ ಹೋರಾಟ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ವರದಿಗೆ ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ವರದಿಯಲ್ಲಿ ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ಅಂದಾಜಿಸಲಾಗಿದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಒಕ್ಕಲಿಗ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ವಿಷಯದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಒಕ್ಕಲಿಗರು ಮತ್ತು ಇತರ ಅನ್ಯಾಯಕ್ಕೊಳಗಾದ ಸಮುದಾಯಗಳು ಒಟ್ಟಾಗಿ ಹೋರಾಟ ಮಾಡಲು ಒಕ್ಕಲಿಗರ ಸಂಘ ಘೋಷಿಸಿದೆ.

ಬೆಂಗಳೂರು, ಏಪ್ರಿಲ್ 15: ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Government) ಜಾರಿ ಮಾಡಲು ಮುಂದಾಗಿರುವ ಜಾತಿ ಗಣತಿ ವರದಿಗೆ (Karnataka Caste Census Report) ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜಾತಿಗಣತಿ ವರದಿ ಜಾರಿಯಾದರೆ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ, ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಹೋರಾಟ ಮಾಡುತ್ತೇವೆ. ಒಕ್ಕಲಿಗ ಮತ್ತು ವೀರಶೈವ ಲಿಂಗಾಯತರು ಒಟ್ಟಿಗೆ ಸೇರಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಂತರಾಜು ಆಯೋಗ ವರದಿ ಜಾರಿಗೆ ಮುಂದಾಗಿದೆ. ಕಾಂತರಾಜು ಆಯೋಗ ವರದಿ ಆರೋಗ್ಯಕರವಾಗಿಲ್ಲ. 10 ವರ್ಷದ ಬಳಿಕ ಜಾತಿಗಣತಿ ವರದಿ ಬಿಡುಗಡೆ ಮಾಡಲಾಗಿದೆ. ಕೇವಲ 60 ಲಕ್ಷ ಒಕ್ಕಲಿಗ ಸಮುದಾಯದ ಜನ ಇದ್ದಾರೆ ಎಂದಿದ್ದಾರೆ. ಪ್ರತಿ ತಾಲೂಕಿನಲ್ಲಿ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ನೋಡಿದ್ದೇವೆ. ಜಾತಿವಾರು ಸಮುದಾಯ ಲೆಕ್ಕ ನೋಡಿದಾಗ ಲೆಕ್ಕ ಸಿಗಲಿದೆ. 224 ಕ್ಷೇತ್ರದಲ್ಲಿ ಕೇವಲ 61 ಲಕ್ಷ ಮಾತ್ರ ಒಕ್ಕಲಿಗರು ಇದ್ದಾರಾ ಎಂದು ಪ್ರಶ್ನಿಸಿದರು.
ಒಕ್ಕಲಿಗರ ಸಮುದಾಯವನ್ನು ಆರನೇ ಸ್ಥಾನದಲ್ಲಿ ಇರಿಸಲಾಗಿದೆ. ಮೀಸಲಾತಿ ಯಾರಿಗೆ ಹೆಚ್ಚು ಕೊಡಿಸಬೇಕು ಅನ್ನೋ ದೃಷ್ಟಿಯಿಂದ ಮಾಡಲಾಗಿದೆ. ನಮ್ಮ ಜನಾಂಗ, ವೀರಶೈವ ಲಿಂಗಾಯತರು, ಇತರೆ ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಸೇರಿ ಹೋರಾಟ ಮಾಡಲಿದ್ದೇವೆ. ಜಾತಿಗಣತಿ ವರದಿಗೆ ರಾಜ್ಯ ಒಕ್ಕಲಿಗ ಸಂಘ ತೀವ್ರ ವಿರೋಧಿಸುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಒಬಿಸಿ ವರ್ಗೀಕರಣದಲ್ಲಿ ಬದಲಾವಣೆ, ಮೀಸಲಾತಿ ಶೇ 51ಕ್ಕೆ ಹೆಚ್ಚಿಸಲು ಜಾತಿ ಗಣತಿ ವರದಿಯಲ್ಲಿ ಶಿಫಾರಸು
ಡಿಸಿಎಂ ಡಿಕೆ ಶಿವಕುಮಾರ್ ಸಭೆ
ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗೆ ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ, ಒಕ್ಕಲಿಗ ಸಮುದಾಯದ ಶಾಸಕರ ಜೊತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ. ಸಮುದಾಯದ ಸಚಿವರು, ಹಿರಿಯರ ಅಭಿಪ್ರಾಯ ಕೇಳಬೇಕು. ಸಮುದಾಯ ಪ್ರತಿನಿಧಿಯಾಗಿ ಕ್ಯಾಬಿನೆಟ್ನಲ್ಲಿ ಸಲಹೆ ನೀಡಬೇಕು. ಅದಕ್ಕಾಗಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವೆ. ನಾನು ಸರ್ವಜ್ಞನಲ್ಲ, ಪಂಡಿತನೂ ಅಲ್ಲ, ಹಳ್ಳಿಯಿಂದ ಬಂದವನು. ಎಲ್ಲ ಅವಲೋಕಿಸಿ, ತಿಳಿದುಕೊಂಡು ಕ್ಯಾಬಿನೆಟ್ನಲ್ಲಿ ಮಾತಾಡುವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.