ಒಬಿಸಿ ವರ್ಗೀಕರಣದಲ್ಲಿ ಬದಲಾವಣೆ, ಮೀಸಲಾತಿ ಶೇ 51ಕ್ಕೆ ಹೆಚ್ಚಿಸಲು ಜಾತಿ ಗಣತಿ ವರದಿಯಲ್ಲಿ ಶಿಫಾರಸು
ಒಬಿಸಿ ವರ್ಗೀಕರಣದಲ್ಲಿ ಬದಲಾವಣೆ ಮಾಡುವುದರ ಜತೆಗೆ, ಒಬಿಸಿ ಮೀಸಲಾತಿಯನ್ನೂ ಹೆಚ್ಚು ಮಾಡಬೇಕೆಂದು ಜಾತಿ ಗಣತಿ ವರದಿಯಲ್ಲಿ ಜಯಪ್ರಕಾಶ್ ಹೆಗ್ಡೆ ಆಯೋಗ ಶಿಫಾರಸು ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಒಕ್ಕಲಿಗರ ಸಂಘದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಾಗಾದರೆ, ಜಯಪ್ರಕಾಶ್ ಹೆಗ್ಡೆ ಆಯೋಗ ಮಾಡಿರುವ ಶಿಫಾರಸೇನು? ಹಾಲಿ ಮೀಸಲಾತಿ ಎಷ್ಟಿದೆ? ಇಲ್ಲಿದೆ ವಿವರ.

ಬೆಂಗಳೂರು, ಏಪ್ರಿಲ್ 12: ಒಬಿಸಿ ಮೀಸಲಾತಿಯಲ್ಲಿ (OBC Reservation) ಬದಲಾವಣೆ ಹಾಗೂ ಒಬಿಸಿ ವರ್ಗೀಕರಣದಲ್ಲೂ ಬದಲಾವಣೆಗೆ ಜಾತಿ ಗಣತಿಯಲ್ಲಿ (Caste Census) ಶಿಫಾರಸು ಮಾಡಲಾಗಿದೆ ಎಂಬ ವಿಚಾರ ಇದೀಗ ತಿಳಿದುಬಂದಿದೆ. ಒಬಿಸಿ ಮೀಸಲಾತಿ ಹೆಚ್ಚಿಸುವಂತೆ ಜಯಪ್ರಕಾಶ್ ಹೆಗ್ಡೆ ಆಯೋಗದಿಂದ ಶಿಫಾರಸು ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಒಬಿಸಿ ಮೀಸಲಾತಿಯನ್ನು ಶೇಕಡಾ 32 ರಿಂದ ಶೇಕಡಾ 51 ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಅದೇ ರೀತಿ ಹಾಲಿ ಇರುವ ಪ್ರವರ್ಗ 1 ಬದಲಿಗೆ ಪ್ರವರ್ಗ A, ಪ್ರವರ್ಗ B ರಚನೆಗೆ ಶಿಫಾರಸು ಮಾಡಲಾಗಿದೆ. ಜತೆಗೆ, ಪ್ರವರ್ಗ 1ಎಗೆ ಶೇ 6, 1ಬಿಗೆ ಶೇ 12, 2ಎಗೆ ಶೇ 10, 2ಬಿಗೆ ಶೇ 8ರಷ್ಟು, 3ಎಗೆ ಶೇ 7ರಷ್ಟು, 3ಬಿಗೆ ಶೇ 8ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ.
ಪ್ರವರ್ಗ 1ಕ್ಕೆ ಶೇ 4, 2ಎಗೆ ಶೇ 15, 2ಬಿಗೆ ಶೇ 4, 3ಎಗೆ ಶೇ 4ರಷ್ಟು, 3ಬಿಗೆ ಶೇ 5, ಎಸ್‌ಸಿಗೆ ಶೇ 17.15, ಎಸ್‌ಟಿಗೆ ಶೇ 6.95ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಸದ್ಯ, ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿಯಿದೆ. ಒಟ್ಟು ಮೀಸಲಾತಿ ಪ್ರಮಾಣ ಶೇಕಡಾ 66ರಷ್ಟಿದೆ. ಪ್ರವರ್ಗ ಒಂದರಲ್ಲಿದ್ದ ಕೆಲ ಜಾತಿಗಳನ್ನು 1Aಗೆ ವರ್ಗೀಕರಿಸಲು ಶಿಫಾರಸು ಮಾಡಲಾಗುದೆ. ಕೆಲ ಜಾತಿಗಳನ್ನು ಕಾಯಕದ ಆಧಾರದಲ್ಲಿ 1 A ಗೆ ವರ್ಗೀಕರಿಸಲು ಶಿಫಾರಸು ಮಾಡಲಾಗಿದೆ.
ಪ್ರವರ್ಗ 1 ಹಾಗೂ 2A ನಲ್ಲಿ ಇದ್ದ ಕೆಲ ಸಮುದಾಯಗಳನ್ನು ಹಾಲಿ ಸಾಮಾಜಿಕ ಪರಿಸ್ಥಿತಿ ಆಧರಿಸಿ 1 B ಗೆ ವರ್ಗಿಕರಿಸಲು ಶಿಫಾರಸು ಮಾಡಲಾಗಿದೆ. ಜತೆಗೆ, ಕುಶಲಕರ್ಮಿ, ಅಲೆಮಾರಿ, ಕುಲಕಸುಬು ಆಧಾರಿತವಾಗಿ ವರ್ಗೀಕರಣ ಮಾಡಿ ಶಿಫಾರಸು ಮಾಡಲಾಗಿದೆ.
ಹಾಲಿ ಮೀಸಲಾತಿ ಪ್ರಮಾಣ ಹೇಗಿದೆ?
- ಪ್ರವರ್ಗ 1 – ಶೇ 4
- 2ಎ – ಶೇ 15
- 2ಬಿ- ಶೇ 4
- 3ಎ – ಶೇ 4
- 3ಬಿ- ಶೇ 5
- ಪರಿಶಿಷ್ಟ ಜಾತಿ – ಶೇ 17.15
- ಪರಿಶಿಷ್ಟ ಪಂಗಡ – ಶೇ 6.95
- ಆರ್ಥಿಕವಾಗಿ ಹಿಂದುಳಿದವರು – ಶೇ 10
- ಒಟ್ಟು ಮೀಸಲಾತಿ ಪ್ರಮಾಣ – ಶೇ 66
ಇದನ್ನೂ ಓದಿ: ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಲು ಏ. 17ಕ್ಕೆ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ ನಿಗದಿ
ಜಾತಿ ಗಣತಿಗೆ ಒಕ್ಕಲಿಗರ ಸಂಘದಿಂದ ವಿರೋಧ
ಜಾತಿ ಗಣತಿ ಹಾಗೂ ಮೀಸಲಾತಿ ಬದಲಾವಣೆಗೆ ಒಕ್ಕಲಿಗರ ಸಂಘ ವಿರೋಧ ವ್ಯಕ್ತಪಡಿಸಿದೆ. ನಾವು ಮೊದಲಿನಿಂದಲೂ ಈಗಿನ ಜಾತಿ ಗಣತಿಯನ್ನು ವಿರೋಧಿಸಿದ್ದೇವೆ. ಹಾಗೊಂದು ವೇಳೆ ಜಾರಿ ಮಾಡುವುದೇ ಆದರೆ, ಹೊಸದಾಗಿ ಸಂಪೂರ್ಣವಾಗಿ ಸಮೀಕ್ಷೆ ಮಾಡಿ ಅನುಷ್ಠಾನ ಮಾಡಲಿ ಎಂದು ಒಕ್ಕಲಿಗರ ಸಂಘದ ಕೆಂಚೇಗೌಡ ಆಗ್ರಹಿಸಿದ್ದಾರೆ.