ಪೊಲೀಸರಿಗೆ ಸವಾಲಾದ ಸುದ್ದಗುಂಟೆಪಾಳ್ಯ ಲೈಂಗಿಕ ದೌರ್ಜನ್ಯ ಕೇಸ್: ಹಗಲು ರಾತ್ರಿ ತಡಕಾಡಿದ್ರು ಸಿಗದ ಆರೋಪಿ
ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರೋಪಿ ಪತ್ತೆ ಆಗಿಲ್ಲ. ಒಂದು ವಾರದಿಂದ ಪೊಲೀಸರು ಹಗಲು ರಾತ್ರಿ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಬೆಂಗಳೂರು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 1600ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರು, ಏಪ್ರಿಲ್ 12: ನಗರದ ಸುದ್ದಗುಂಟೆಪಾಳ್ಯದಲ್ಲಿ (Suddaguntapalya) ಯುವತಿಯ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಒಂದು ವಾರವಾದರು ಕೂಡ ಆರೋಪಿ ಪತ್ತೆಯಾಗಿಲ್ಲ. 1600ಕ್ಕೂ ಹೆಚ್ಚು ಸಿಸಿಟಿವಿ, 25 ಮಂದಿ ಪೊಲೀಸರಿಂದ (police) ಹಗಲು ರಾತ್ರಿ ಕಾರ್ಯಾಚರಣೆ ಮಾಡಿದರೂ ಆತನ ಸುಳಿವಿಲ್ಲ. ಸದ್ಯ ಸುದ್ದಗುಂಟೆಪಾಳ್ಯ ಪೊಲೀಸರಿಗೆ ಪ್ರಕರಣ ಸವಾಲಾಗಿದೆ. ಘಟನೆ ನಡೆದ ದಿನವೇ ಆರೋಪಿ ಬೆಂಗಳೂರು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿಯ ಬೆನ್ನು ಬಿದ್ದಿರುವ ಖಾಕಿ ಪಡೆ, ನಾಲ್ಕು ವಿಶೇಷ ತಂಡಗಳಲ್ಲಿ 25 ಜನರಿಂದ ಬೆಂಗಳೂರಿನಿಂದ ಕೃಷ್ಣಗಿರಿಯವರೆಗೂ ಕಾರ್ಯಾಚರಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಿಂದ ಹೊಸೂರುವರೆಗೂ ಬರೋಬ್ಬರಿ 1600ಕ್ಕೂ ಹೆಚ್ವು ಸಿಸಿಕ್ಯಾಮೆರಾಗಳ ಪರಿಶೀಲನೆ ಮಾಡಲಾಗಿದೆ. ತಮಿಳುನಾಡಿನಲ್ಲಿ ಬೀಡುಬಿಟ್ಟಿರುವ ಎರಡು ವಿಶೇಷ ತಂಡದಿಂದ ಕೂಡ ಹುಡುಕಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಅನುಚಿತ ವರ್ತನೆ, ಕೃತ್ಯದ ವಿಡಿಯೋ ವೈರಲ್
ಯುವತಿಗೆ ಕಿರುಕುಳ ಕೊಟ್ಟು ಒಬ್ಬನೇ ಎಸ್ಕೇಪ್ ಆಗಿರುವ ಆರೋಪಿ, ಮೊಬೈಲ್ ಬಳಸದೆ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ಬೈಕ್ನಲ್ಲಿ ಹೊಸೂರು ಮಾರ್ಗವಾಗಿ ಸಂಚಾರ ಮಾಡಿರುವ ಆರೋಪಿ, ಬಟ್ಟೆ, ಮಾರ್ಗ ಮತ್ತು ವಾಹನಗಳನ್ನು ಬದಲಿಸಿಕೊಂಡು ಸಂಚಾರ ಮಾಡಿದ್ದಾನೆ ಎನ್ನಲಾಗುತ್ತಿದೆ.
ಘಟನೆ ಹಿನ್ನಲೆ
ಶುಕ್ರವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಹಿಂದೆ ಬರುವ ಖತರ್ನಾಕ್ ಆಸಾಮಿ ನೋಡ ನೋಡ್ತಿದ್ದಂತೆ ಓರ್ವ ಯುವತಿಯನ್ನ ಬಲವಂತವಾಗಿ ಹಿಡಿದುಕೊಂಡಿದ್ದ. ಬಳಿಕ ಆ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದು ಪರಾರಿಯಾಗಿದ್ದ.
ಬಳಿಕ ಘಟನೆ ಬಗ್ಗೆ ನೊಂದ ಯುವತಿ ದೂರು ನೀಡಿರಲಿಲ್ಲ. ಆ ಯುವತಿ ಯಾರು ಅನ್ನೋದೂ ಗೊತ್ತಾಗಿರಲಿಲ್ಲ. ಆದರೆ ಪೊಲೀಸರು ವಿಡಿಯೋ ಆಧರಿಸಿ ಸ್ಥಳೀಯ ವ್ಯಕ್ತಿಯಿಂದ ದೂರು ಪಡೆದು, ಆರೋಪಿ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ಯುವತಿಗೆ ಲೈಂಗಿಕ ದೌರ್ಜನ್ಯ: ದೊಡ್ಡ ನಗರದಲ್ಲಿ ಇಂತಹ ಘಟನೆಗಳು ಆಗುತ್ತವೆ ಎಂದ ಪರಮೇಶ್ವರ
ಇನ್ನು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಸ್ಥಳೀಯ ವ್ಯಕ್ತಿ, ಯುವತಿಯರು ಮಧ್ಯರಾತ್ರಿ ಓಡಾಡಿದರೂ ಹುಡುಗ ಮಾಡಿರುವ ಕೃತ್ಯಕ್ಕೆ ಕಾನೂನು ಕ್ರಮ ಆಗಬೇಕು ಅಂತ ಆಗ್ರಹಿಸಿದ್ದರು.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Sat, 12 April 25