ಜಾತಿಗಣತಿ ಜಟಾಪಟಿ: ನಾಳೆ ಒಕ್ಕಲಿಗ ಶಾಸಕರ ಸಭೆ ಕರೆದ ಡಿಕೆ ಶಿವಕುಮಾರ್, ಸಂಚಲನ ಮೂಡಿಸಿದ ಡಿಸಿಎಂ ನಡೆ
ಜಾತಿಗಣತಿ ವರದಿಯಲ್ಲಿ ಅನ್ಯಾಯವಾಗಿದೆ ಎಂದು ಅಸಮಾಧಾನ ಹಿನ್ನೆಲೆ, ಡಿಸಿಎಂ ಡಿಕೆ ಶಿವಕುಮಾರ್ ನಾಳೆ ಒಕ್ಕಲಿಗ ಶಾಸಕರ ಸಭೆ ಕೆರದಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ಮೀಟಿಂಗ್ ನಡೆಯಲಿದ್ದು, ವರದಿ ಬಗ್ಗೆ ಸಾಧಕ, ಬಾಧಕಗಳನ್ನ ಚರ್ಚಿಸಲಾಗುತ್ತೆ. ಸದ್ಯ ಡಿಕೆ ಶಿವಕುಮಾರ್ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು, ಏಪ್ರಿಲ್ 14: ಸದ್ಯ ಕರ್ನಾಟಕದಲ್ಲಿ ಜಾತಿಗಣತಿ ವರದಿ (Caste Census) ಜಟಾಪಟಿ ಭುಗಿಲೆದ್ದಿದೆ. ಜಾತಿಗಣತಿ ಅನ್ನೋ ಜೇನುಗೂಡಿಗೆ ಕಲ್ಲೊಡೆದಿರುವ ಸರ್ಕಾರ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದು, ಪರ ವಿರೋಧ ಚರ್ಚೆ ಜೋರಾಗುತ್ತಿದೆ. ಹೀಗಿರುವಾಗಲೇ ಜಾತಿ ಗಣತಿ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಾಳೆ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಮಹತ್ವದ ಸಭೆ ಕರೆದಿದ್ದು, ಅವರೊಂದಿಗೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ನಾಳೆ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ ಯಾರ ಮನಸ್ಸಿಗೂ ನೋವಾಗದಂತೆ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ ಎಂದಿದ್ದಾರೆ.
ನಾಳೆ ಸಂಜೆ ಸಭೆ
ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಸರ್ಕಾರಿ ನಿವಾಸದಲ್ಲಿ ದಿನಾಂಕ ನಾಳೆ (ಏ. 15ರಂದು) ಸಂಜೆ 6.00 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ.
ಎಲ್ಲರಿಗೂ ನ್ಯಾಯ ಒದಗಿಸುವ ಪಕ್ಷ ಕಾಂಗ್ರೆಸ್
ಧರ್ಮದ ಆಧಾರದಲ್ಲಿ ಟೆಂಡರ್ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ ಕಸಿಯುತ್ತಿದೆ ಎನ್ನುವ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಮೀಸಲಾತಿ ನೀಡಲಾಗಿದೆ. ಸಮಾಜದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆ. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕ ವರದಿ ರೂಪಿಸಿ: ಅಶೋಕ್ ಆಗ್ರಹ
ಒಬಿಸಿಗಳ ಮೀಸಲಾತಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಬೆಂಗಳೂರಿನ ಸಂಸದರೊಬ್ಬರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಎದೆ ಸೀಳಿದರೆ ಅಕ್ಷರವಿಲ್ಲ, ಪಂಕ್ಚರ್ ಹಾಕಲು ಮಾತ್ರ ಸೀಮಿತ. ಆದರೆ ನಾವು ಆ ಸಮುದಾಯ ಇತರೆ ಕೆಲಸಗಳನ್ನು ಮಾಡಲು ಸಾಮರ್ಥ್ಯ ಹೊಂದಿದ್ದೇವೆ ಎಂದು ತೋರಿಸಬೇಕಾಗಿದೆ ಎಂದರು.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಡಿಕೆ ಶಿವಕುಮಾರ್ ಟಾಂಗ್
ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆ ಹೆಸರನ್ನು ಬದಲಾಯಿಸಿಕೊಳ್ಳಬೇಕು. ಕೇಂದ್ರದ ವಿರುದ್ಧ ಜನಾಕ್ರೋಶ ಯಾತ್ರೆ ಅಂತಾ ಬದಲಿಸಿಕೊಳ್ಳಲಿ. ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ಜಿಎಸ್‌ಟಿ ವಿಧಿಸುತ್ತಿದೆ. ಕೇಂದ್ರ ಸರ್ಕಾರ ಎಲ್ಲದರ ಮೇಲೂ ಜಿಎಸ್‌ಟಿ ಹಾಕುತ್ತಿದೆ. ಎಲ್ಪಿಜಿ ಸಿಲಿಂಡರ್ ದರ 50 ರೂ. ಹೆಚ್ಚಳ ಮಾಡಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.