ಘೋಷಣೆಯಂತೆ ಲಾರಿ ಮುಷ್ಕರ ನಿಶ್ಚಿತ: ಸರ್ಕಾರ ಕರೆದರೆ ಮಾತುಕತೆಗೆ ಸಿದ್ಧವೆಂದ ಅಧ್ಯಕ್ಷ ಷಣ್ಮುಗಪ್ಪ
Lorry Strike: ಡಿಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿ ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ನೀಡಿದೆ. ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಮುಷ್ಕರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದಿದ್ದಾರೆ.

ಬೆಂಗಳೂರು, ಏಪ್ರಿಲ್ 14: ಬೆಲೆ ಏರಿಕೆಯಿಂದ ಕಂಗೆಟ್ಟು ಹೋಗಿರುವ ಜನಸಮಾನ್ಯರಿಗೆ ಮತ್ತೊಂದು ಬಿಸಿ ತಟ್ಟಲಿದೆ. ಇಂದು ಮಧ್ಯರಾತ್ರಿಯಿಂದಲೇ ರಾಜ್ಯದ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಡೀಸೆಲ್ ಬೆಲೆ ಇಳಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ಅನಿರ್ದಿಷ್ಠವಧಿ ಮುಷ್ಕರಕ್ಕೆ (Lorry strike) ಕರೆ ನೀಡಿದೆ. ಈ ವಿಚಾರವಾಗಿ ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ (Shanmugappa), ನಮನ್ನು ಇದುವರೆಗೂ ಯಾರು ಕರೆದು ಮಾತನಾಡಿಲ್ಲ. ಹಾಗಾಗಿ ನಾವು ಘೋಷಣೆ ಮಾಡಿದಂತೆ ಮುಷ್ಕರ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.
ಸರ್ಕಾರ ಕರೆದರೆ ಮಾತುಕತೆಗೆ ನಾವು ಸಿದ್ಧ: ಅಧ್ಯಕ್ಷ ಷಣ್ಮುಗಪ್ಪ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಷಣ್ಮುಗಪ್ಪ, ಹಲವು ಬಾರಿ ಸಿಎಂ ಸಿದ್ದರಾಮಯ್ಯನವರಿಗೆ ನಾವು ಪತ್ರ ಬರೆದಿದ್ದೆವು. ಸರ್ಕಾರ ಕರೆದರೆ ಮಾತುಕತೆಗೆ ನಾವು ಸಿದ್ಧವಾಗಿದ್ದೇವೆ. ಕೂಡಲೇ ಲಾರಿ ಮಾಲೀಕರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Lorry Strike: ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ, ನಾಳೆಯಿಂದ ಅಗತ್ಯ ವಸ್ತುಗಳ ಸಾಗಾಟಕ್ಕೆ ತಟ್ಟಲಿದೆ ಬಿಸಿ
ಕಳೆದ 6 ತಿಂಗಳಲ್ಲಿ ಡೀಸೆಲ್ ದರ 5 ರೂ. ಹೆಚ್ಚಳ ಮಾಡಿದ್ದಾರೆ. ಇದರಿಂದ ಲಾರಿ ಮಾಲೀಕರಿಗೆ ಕಷ್ಟ ಆಗುತ್ತೆ. ರಾಜ್ಯದಲ್ಲಿ ಮೊದಲು ಕಡಿಮೆ ದರ ಇದ್ದಿದ್ದರಿಂದ ಈ ಹಿಂದೆ ಬೇರೆ ರಾಜ್ಯದ ಲಾರಿ ಚಾಲಕರು ಕರ್ನಾಟಕಕ್ಕೆ ಬರುತ್ತಿದ್ದರು. ಸರ್ಕಾರ ಕೂಡಲೇ ಡೀಸೆಲ್ ದರ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.
ಲಾರಿ ಮಾಲೀಕರು, ಟ್ರ್ಯಾಕ್ಟರ್ ಮಾಲೀಕರು, ರೈತರು ಪರದಾಡುತ್ತಿದ್ದಾರೆ. ಗಡಿ ಚೆಕ್ಪೋಸ್ಟ್ಗಳಲ್ಲಿ ಆರ್ಟಿಓ ಅಧಿಕಾರಿಗಳ ಸುಲಿಗೆ ನಿಲ್ಲಬೇಕು. ಬೆಂಗಳೂರು ನಗರಕ್ಕೆ ಎಂಟ್ರಿ ಆಗುವ ಲಾರಿಗಳಿಗೆ ನಿರ್ಬಂಧ ಸಡಿಲಿಸಬೇಕು. ದಿನಬಳಕೆ ವಸ್ತುಗಳ ಲಾರಿಗಳಿಗೆ ಇರುವ ನಿರ್ಬಂಧ ಸಡಿಲಿಸಬೇಕು. ಇದರಿಂದ ಚಾಲಕರು ಗಂಟೆಗಟ್ಟಲೇ ಕಾಯುವ ಸ್ಥಿತಿ ಉಂಟಾಗಿದೆ ಎಂದಿದ್ದಾರೆ.
ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘದ ಪ್ರಮುಖ ಬೇಡಿಕೆಗಳು
- ಡೀಸೆಲ್ ಬೆಲೆ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆಯಬೇಕು.
- ಟೋಲ್ ದರ ಹೆಚ್ಚಳ ಮಾಡಿರುವುದು ಹಿಂಪಡೆಯಬೇಕು.
- ಬಾರ್ಡರ್ ಚೆಕ್ ಪೋಸ್ಟ್ ತೆರವು ಮಾಡಬೇಕು.
- FC ಶುಲ್ಕ ಹೆಚ್ಚಳ ಕೈಬಿಡಬೇಕು.
- ಬೆಂಗಳೂರು ನಗರಕ್ಕೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಇರುವ ನಿರ್ಬಂಧ ಸಡಿಲಿಕೆ ಮಾಡಬೇಕು.
ಲಾರಿ ಮುಷ್ಕರಕ್ಕೆ ಯಾರೆಲ್ಲಾ ಬೆಂಬಲ?
ಲಾರಿ ಮಾಲೀಕರ ಮುಷ್ಕರಕ್ಕೆ ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾರ್ಪೇರೇಷನ್, ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿ ಮಾಲೀಕರು ಸೇರಿದಂತೆ 10 ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ಒಂದು ದಿನ ಮಾತ್ರ ಟ್ಯಾಕ್ಸಿ ಸೇವೆ ಬಂದ್ ಮಾಡಲು ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್ ನಿರ್ಧರಿಸಿದೆ. ನಾಳೆಯ ಪರಿಸ್ಥಿತಿ ನೋಡಿಕೊಂಡು ಅನಿರ್ಧಿಷ್ಠವಧಿ ಮುಷ್ಕರದ ಬಗ್ಗೆ ನಿರ್ಧರಿಸಲಿದ್ದಾರೆ.
ವರದಿ: ಲಕ್ಷ್ಮೀ ನರಸಿಂಹ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Mon, 14 April 25