ಡೀಸೆಲ್ ದರ ಏರಿಕೆ ಖಂಡಿಸಿ ಏ. 14 ರಂದು ಲಾರಿ ಮಾಲೀಕರ ಮುಷ್ಕರ: ಯಾರ್ಯಾರ ಬೆಂಬಲ?
ಕರ್ನಾಟಕ ಸರ್ಕಾರ ಎರಡು ರೂಪಾಯಿಯಷ್ಟು ಡೀಸೆಲ್ ಬೇಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರದ ಈ ದರ ಏರಿಕೆ ಗೆ ಲಾರಿ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ದರ ಏರಿಕೆಯನ್ನು ವಿರೋಧಿಸಿ ಲಾರಿ ಮಾಲೀಕರ ಸಂಘ ಏಪ್ರಿಲ್ 14 ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಪ್ರತಿಭಟನೆಯಿಂದ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಸರಬರಾಜು ಕೂಡ ಬಂದ್ ಆಗಲಿದೆ.

ಬೆಂಗಳೂರು, ಏಪ್ರಿಲ್ 05: ರಾಜ್ಯದಲ್ಲಿ ಈಗಾಗಲೇ ಎಲ್ಲ ದರಗಳು ಗಗನಕ್ಕೇರಿವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ (Karnataka Government) ಡೀಸೆಲ್ (Diesel) ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು ಇದು ಲಾರಿ ಮಾಲೀಕರ (Lory Owners) ಆಕ್ರೋಶಕ್ಕೆ ಕಾರಣವಾಗಿದೆ. ಡೀಸೆಲ್ ದರ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಏಪ್ರಿಲ್ 14ರ ಮಧ್ಯರಾತ್ರಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ಈಗಾಗಲೇ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಕೆರಳಿ ಕೆಂಡವಾಗಿರುವ ಲಾರಿ ಮಾಲೀಕರು, ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿದೆ. ಇದರಿಂದ ಪ್ರತಿ ತಿಂಗಳು ಸಾವಿರಾರು ರುಪಾಯಿ ಹೊರೆ ಆಗಲಿದೆ. ಇಂತಹ ಸಂದರ್ಭದಲ್ಲೇ ಮತ್ತೆ ರಾಜ್ಯ ಸರ್ಕಾರ ಡೀಸೆಲ್ ದರ ಹೆಚ್ಚಳ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ರಾಜ್ಯ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಬಾರಿ ಡೀಸೆಲ್ ದರ ಹೆಚ್ಚಳ ಮಾಡಿದೆ. ಕಳೆದ ವರ್ಷ ಜೂನ್- 15 ಕ್ಕೆ ಮೂರು ರುಪಾಯಿ, ಈ ವರ್ಷ ಏಪ್ರಿಲ್- 1 ರಂದು ಎರಡು ರುಪಾಯಿ ಹೆಚ್ಚಳ ಮಾಡಿದ್ದಾರೆ. ಇದರಿಂದ ಲಾರಿ ಮಾಲೀಕರು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ 6 ಲಕ್ಷ ಲಾರಿಗಳಿವೆ. ಎಲ್ಲ ಲಾರಿಗಳನ್ನು ಟೋಲ್ ಮತ್ತು ಹೈವೇಗಳಲ್ಲಿ ಬಿಟ್ಟು ಮುಷ್ಕರ ಮಾಡುತ್ತೇವೆ. ನಮ್ಮ ಮುಷ್ಕರದಲ್ಲಿ ಪೆಟ್ರೋಲ್, ಡೀಸೆಲ್ ಬಂಕ್ಗಳು ಬಂಧ್ ಆಗಲಿದೆ. ಡೀಸೆಲ್ ಬೆಲೆ ಇಳಿಕೆ ಮಾಡಲು ಈಗಾಗಲೇ ಗಡುವು ನೀಡಿದ್ವಿ. ಆದರೆ ಸರ್ಕಾರ ಡಿಸೇಲ್ ದರ ಕಡಿಮೆ ಮಾಡಲು ಮುಂದಾಗಿಲ್ಲ. ಹೀಗಾಗಿ ಏಪ್ರಿಲ್ 14 ರಂದು ರಾಜ್ಯಾದ್ಯಂತ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ, ಡೀಸೆಲ್ ದರ ಏರಿಕೆ
ಲಾರಿ ಮುಷ್ಕರದಿಂದ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳು ಸರಬರಾಜು ಆಗುವುದಿಲ್ಲ. ಇದರಿಂದ ತುಂಬಾ ಸಮಸ್ಯೆ ಆಗಲಿದೆ. ಕೂಡಲೇ ಸರ್ಕಾರ ಡೀಸೆಲ್ ದರ ಇಳಿಸಬೇಕು. ಇಲ್ಲದಿದ್ದರೇ ನಾವು ಲಾರಿ ಮುಷ್ಕರಕ್ಕೆ ಬೆಂಬಲ ನೀಡುತ್ತೇವೆ ಎಂದು ಹೋಲ್ ಸೇಲ್ ವ್ಯಾಪಾರಿ ರವಿ ಕುಮಾರ್ ಹೇಳಿದರು.
ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯುನಿಯನ್ ಸಹ ಬೆಂಬಲ ವ್ಯಕ್ತಪಡಿಸಿದೆ. ಏಪ್ರಿಲ್ 15 ರಂದು ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದೆ. ಅನಿರ್ದಿಷ್ಟಾವಧಿ ಮುಷ್ಕರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬಂದ್ ಆಗಿಲಿದೆ ಅಗತ್ಯ ಸೌಲಭ್ಯ ಸರಬರಾಜು
- ಏರ್ ಪೋರ್ಟ್ ಟ್ಯಾಕ್ಸಿ ಬಂದ್
- ಜಲ್ಲಿ ಕಲ್ಲು, ಮರಳು ಲಾರಿ ಬಂದ್
- ಗೂಡ್ಸ್ ವಾಹನಗಳು ಬಂದ್
- 5 ಲಕ್ಷ ಲಾರಿ ಬಂದ್
- ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿ ಬಂದ್
- ಚಾಲಕರ ಸಂಘದಿಂದ ಬಂದ್
- ಹೊರ ರಾಜ್ಯದಿಂದಲೂ ವಾಹನ ಬರುವುದಿಲ್ಲ
ವರದಿ: ಲಕ್ಷ್ಮೀ ನರಸಿಂಹ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Sat, 5 April 25