ಬೆಂಗಳೂರಿನಲ್ಲಿ ಕೂಲಿಂಗ್ ಉತ್ಪನ್ನಗಳ ಬೆಲೆ ದಿಢೀರ್ ಏರಿಕೆ: ಖರೀದಿಗೂ ಮುನ್ನವೇ ಬೆವರಿದ ಗ್ರಾಹಕರು
ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಿನ ತೀವ್ರ ಬಿಸಿಲಿನಿಂದಾಗಿ, ಏರ್ ಕಂಡಿಷನರ್, ಏರ್ ಕೂಲರ್, ಫ್ಯಾನ್ ಮತ್ತು ರೆಫ್ರಿಜರೇಟರ್‌ಗಳ ಬೇಡಿಕೆ ದುಪ್ಪಟ್ಟಾಗಿದೆ. ಇದರಿಂದಾಗಿ ಈ ಉತ್ಪನ್ನಗಳ ಬೆಲೆ ಕೂಡ 15-25% ರಷ್ಟು ಏರಿಕೆಯಾಗಿದೆ. ಬೇಡಿಕೆ ಹೆಚ್ಚಳ ಮತ್ತು ಇತರೆ ಕಾರಣಗಳಿಂದ ಗ್ರಾಹಕರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ನೀಡಿ ಖರೀದಿಸುವಂತಾಗಿದೆ.

ಬೆಂಗಳೂರು, ಏಪ್ರಿಲ್ 03: ಹಾಟ್ ಹಾಟ್ ವೇದರ್ಗೆ ಸಿಲಿಕಾನ್ ಸಿಟಿಯ ಜನರು ಬಳಲಿ ಬೆಂಡಾಗಿರುವ ಜನಸಾಮಾನ್ಯರು ಬೇಸಿಗೆಯ (Summer) ಧಗೆ ನೀಗಿಸಿಕೊಳ್ಳಲು ನಾನಾ ಮಾರ್ಗಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕೂಲಿಂಗ್ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ಶೋರೂಂಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಏರ್ ಕಂಡಿಷನರ್ (Air conditioner), ಏರ್ ಕೂಲರ್, ಫ್ಯಾನ್, ಫ್ರಿಡ್ಜ್ಗಳ ಖರೀದಿ ಭರಾಟೆ ಜೋರಾಗಿದೆ. ಆದರೆ ಡಿಮ್ಯಾಂಡ್ ಹಾಗೂ ಮತ್ತಿತರ ಕಾರಣಗಳಿಂದ ಗ್ರಾಹಕರ ಮೇಲೆ ಇಲ್ಲಿಯೂ ಬೆಲೆ ಏರಿಕೆಯ ಬರೆ ಬಿದ್ದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಬೆಂಗಳೂರಿನಲ್ಲಿ ಚುರುಕು ಪಡೆದ ಕೂಲಿಂಗ್ ಉತ್ಪನ್ನಗಳ ಮಾರಾಟ
ವಿಪರೀತ ಬಿಸಿಲಿನ ಪರಿಣಾಮ ಹೊರಗಡೆ ಓಡಾಡುವುದು ಕಡಿಮೆ ಮಾಡಿರುವ ಜನರು, ತಣ್ಣಗೆ ಮನೆಯಲ್ಲೇ ಇರೋಣ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಆದರೆ ಮನೆಯಲ್ಲೂ ಧಗ ಧಗ ಎನ್ನುವ ವಾತಾವರಣ ಇದ್ದು, ಏಸಿ, ಕೂಲರ್, ಫ್ರಿಡ್ಜ್ ಹಾಗೂ ಫ್ಯಾನ್ಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಇಷ್ಟು ದಿನ ಡಲ್ ಹೊಡೆಯುತ್ತಿದ್ದ ಇವುಗಳ ವ್ಯಾಪಾರ ವಹಿವಾಟು ಇದೀಗ ಚುರುಕು ಪಡೆದುಕೊಂಡಿದೆ.
ಇದನ್ನೂ ಓದಿ: Bike Taxi: ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ
ಇನ್ನು ಸೀಸನ್ ಇರುವ ಹಿನ್ನೆಲೆ ಸಹಜವಾಗಿ ಗ್ರಾಹಕರ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ಪೂರೈಕೆ ಆಗದೇ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಕೂಲಿಂಗ್ ಉತ್ಪನ್ನಗಳು ಶೇಕಡಾ 25 ಈವರೆಗೂ ಏರಿಕೆ ಆಗಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.
ಕೂಲಿಂಗ್ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ
- ವಿವಿಧ ಶ್ರೇಣಿಯ ಏರ್ ಕೂಲರ್ಗಳು ಬೆಲೆ 10 ಸಾವಿರ ರೂ.ದಿಂದ 25 ಸಾವಿರ ರೂ. ವರೆಗೆ ಅಂದರೆ ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ.
- ವಿವಿಧ ಶ್ರೇಣಿಯ ಏಸಿಗಳು 28 ಸಾವಿರ ರೂ. ದಿಂದ 70 ಸಾವಿರ ರೂ.ಗೆ ಲಭ್ಯವಿದ್ದು, ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ.
- ವಿವಿಧ ಶ್ರೇಣಿಯ ಫ್ರಿಡ್ಜ್ಗಳು 14 ಸಾವಿರ ರೂ.ದಿಂದ 44 ಸಾವಿರ ರೂ. ವರೆಗೂ ಲಭ್ಯವಿದ್ದು, ಶೇಕಡಾ 15 ರಷ್ಟು ಬೆಲೆ ಏರಿಕೆ ಆಗಿದೆ.
- ಫ್ಯಾನ್ಗಳ ಬೆಲೆಯಲ್ಲಿ ಸಹ 15% ಏರಿಕೆ ಆಗಿದೆ.
ಇದನ್ನೂ ಓದಿ: ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ, ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ
ಬಿಸಿಲಿನಿಂದ ಸುಸ್ತಾಗುವುದು ಏಕೆ ಮನೇಲಿ ತಣ್ಣಗೆ ಇರೋಣ ಅಂತ ಏಸಿ, ಕೂಲರ್, ಫ್ಯಾನ್, ಫ್ರಿಡ್ಜ್ ಖರೀದಿಗೆ ಅಂತ ಹೋದರೂ ಕೈ ಸುಡುತ್ತಿದೆ. ಆದರೂ ಸದ್ಯದ ವಾತಾವರಣ ಸಂಭಾಳಿಸಲು ಗ್ರಾಹಕರಿಗೆ ಖರೀದಿ ಅನಿವಾರ್ಯ ಆಗಿರೋದಂತೂ ನಿಜ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 am, Thu, 3 April 25