ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಮಾವು: ಇಂದೇ ಆರ್ಡರ್ ಮಾಡಿ, ಇಲ್ಲಿದೆ ವಿವರ
ಭಾರತೀಯ ಅಂಚೆ ಇಲಾಖೆ ಮಾವಿನ ಹಣ್ಣನ್ನು ಮನೆಗೆ ತಲುಪಿಸುವ ಸೇವೆಯನ್ನು ಪ್ರಾರಂಭಿಸಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾವುಗಳನ್ನು ಬುಕ್ ಮಾಡಬಹುದು. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವುಗಳು ತಲುಪುವ ಈ ಯೋಜನೆಯಿಂದ ಮಧ್ಯವರ್ತಿಗಳನ್ನು ತಪ್ಪಿಸಿ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯವಾಗಿದೆ.

ಬೆಂಗಳೂರು, ಏಪ್ರಿಲ್ 12: ಮಾವಿನ (Mango) ಸುಗ್ಗಿ ಪ್ರಾರಂಭವಾಗಿದೆ. ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಿದ್ದು, ಅಂಚೆಯಣ್ಣ ಮನೆ ಬಾಗಿಲಿಗೆ ಮಾವು ಹೊತ್ತು ತರಲು ಸಿದ್ಧನಾಗಿದ್ದಾನೆ. ಇನ್ನೇಕೆ ತಡ ಇಂದೇ ಆನ್‌ಲೈನ್‌ನಲ್ಲಿ ಬುಕ್ ಮಾಡಿ. ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಮಾರುಕಟ್ಟೆಗೆ ಹೋಗಿ ಖರೀದಿಸತ್ತೇವೆ. ಇನ್ನೂ ಕೆಲವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಕೊಳ್ಳುತ್ತಾರೆ. ಇದೀಗ ಮಾವಿನ ಹಣ್ಣಿನ ಮಾರುಕಟ್ಟೆಗೆ ಅಂಚೆ ಇಲಾಖೆ (Government of India, Department of Post) ಕಾಲಿಟ್ಟಿದೆ. ವಿವಿಧ ತಳಿಯ ಮಾವಿನ ಹಣ್ಣನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಸಾಕು, ಅಂಚೆಯಣ್ಣ ಮನೆ ಬಾಗಿಲಿಗೆ ಮಾವನ್ನು ತಲುಪಿಸುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ರೈತರ ವೆಬ್ಸೈಟ್ನಲ್ಲಿ ಬುಕ್ ಮಾಡಿದ ಮಾವಿನ ಹಣ್ಣುಗಳನ್ನು ಭಾರತೀಯ ಅಂಚೆ ಇಲಾಖೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಏಪ್ರಿಲ್ 7ರಿಂದ ಬೆಂಗಳೂರಿನಲ್ಲಿ ಈ ಮನೆ ಮನೆಗೆ ಮಾವು ಡೆಲಿವರಿ ಕಾರ್ಯ ಆರಂಭವಾಗಿದೆ. ಗ್ರಾಹಕರು ಬುಕ್ ಮಾಡಲು ಮಾವು ಅಭಿವೃದ್ದಿ ನಿಮಗಮದ ವೆಬ್‌ಪೋರ್ಟಲ್ ಕರಿಸಿರಿ www.karsirimangoes.karnataka.gov.in ಭೇಟಿ ನೀಡಬೇಕು.
ನಂತರ ತಮಗೆ ಬೇಕಾಗುವ ತಳಿ ಹಣ್ಣನ್ನು ಆರ್ಡರ್ ಮಾಡಬಹುದು. ಹೀಗೆ ಬುಕ್ ಮಾಡಿದ ಹಣ್ಣು ನೇರವಾಗಿ ರೈತರಿಂದ ಗ್ರಾಹಕರ ಕೈಗೆ ಸೇರುತ್ತದೆ. ಒಂದು ಬಾಕ್ಸ್ನಲ್ಲಿ 3.5 ಕೆ.ಜಿ ಮಾವಿನ ಹಣ್ಣು ಇರಲಿದೆ. ಈ ಹಣ್ಣಿನ ಮೊತ್ತದ ಜೊತೆಗೆ ಪಾರ್ಸೆಲ್ ಚಾರ್ಜ್ ಸೇರಿ ಅಂಚೆ ಇಲಾಖೆ 82 ರೂಪಾಯಿ ತೆಗೆದುಕೊಳ್ಳಲಿದೆ. ಒಂದೊಂದು ಮಾವಿನ ತಳಿಯ ಹಣ್ಣಿಗೆ ಒಂದೊಂದು ಬೆಲೆ ಇದೆ.
ಬೆಂಗಳೂರಿಗೆ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಗ್ರಾಹಕರಿಗೆ ಅಂಚೆ ಮೂಲಕ ಮಾವಿನ ಹಣ್ಣು ತಲುಪಲಿವೆ. 2019 ರಿಂದ ಬೆಂಗಳೂರು ಜಿಪಿಒ ಅಥವಾ ಬೆಂಗಳೂರು ಅಂಚೆ ಮಹಾ ಕಾರ್ಯಾಲಯದಿಂದ ಇದುವರೆಗೆ 1ಲಕ್ಷಕ್ಕೂ ಹೆಚ್ಚು ಮಾವಿನ ಹಣ್ಣಿನ ಬಾಕ್ಸ್ಗಳನ್ನು ಪಾರ್ಸೆಲ್ ಮಾಡಲಾಗಿದೆ. ಇದರಿಂದ ಅಂಚೆ ಇಲಾಖೆಗೆ 83 ಲಕ್ಷ ರೂಪಾಯಿ ಹರಿದು ಬಂದಿದೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಧಾರವಾಡದ ಮಾವು ಬೆಳೆಗಾರರಿಗೆ ಅಪಾರ ನಷ್ಟ; ಸಂಕಷ್ಟದಲ್ಲಿ ರೈತರು
ಈ ಅಂಚೆ ಸೇವೆಯಿಂದ ಗ್ರಾಹಕರು ರೈತರಿಂದ ನೇರವಾಗಿ ಮಾವು ಕೊಳ್ಳಬಹುದು. ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಕೆಮಿಕಲ್ ಮುಕ್ತ ಗುಣಮಟ್ಟದ ಮಾವು ಪಡೆಯಲು ಅವಕಾಶವಿದೆ. ಈ ಬಗ್ಗೆ ಮಾತನಾಡಿದ ಮಾವು ಬೆಳೆದ ರೈತ ಈ ಬಾರಿ ತುಂಬಾ ಒಳ್ಳೆಯ ರೆಸ್ಪಾನ್ಸ್ ಇದೆ ಎಂದು ಹೇಳಿದರು.
ಮಾವಿನ ಹಣ್ಣು ಬುಕ್ ಮಾಡುವುದು ಹೇಗೆ?
- ನಿಗಮದ ವೆಬ್‌ಸೈಟ್ www.karsirimangoes.karnataka.gov.in ಗೆ ಭೇಟಿ ನೀಡಿ
- ನೋಂದಾಯಿತ ರೈತರು ಮಾರುತ್ತಿರುವ ಹಣ್ಣು ಹಾಗೂ ದರದ ಮಾಹಿತಿ ಸಿಗುತ್ತದೆ.
- ಗ್ರಾಹಕರು ತಮಗೆ ಅಗತ್ಯವಿರುವ ಹಣ್ಣನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳಬಹುದು.
- ಆನ್ಲೈನ್ನಲ್ಲೇ (ಅಂಚೆ ಶುಲ್ಕವೂ ಸೇರಿ) ಹಣ ಪಾವತಿಸಬೇಕು
- ಬುಕ್ ಆದ ಕೂಡಲೇ ಇ-ಮೇಲ್ ಮತ್ತು ಮೊಬೈಲ್ಗೆ ಸಂದೇಶ ಬರಲಿದೆ.
- ಅಂಚೆ ಇಲಾಖೆ ಹಾಗೂ ರೈತರಿಗೆ ಬುಕ್ಕಿಂಗ್ ಮಾಹಿತಿ ರವಾನೆಯಾಗುತ್ತದೆ.
- ಬುಕ್ ಮಾಡಿದ 2-3 ದಿನಗಳಲ್ಲಿ ಅಂಚೆಯಣ್ಣ ನಿಮ್ಮ ಮನೆ ಬಾಗಿಲಿಗೆ ಮಾವು ತರುತ್ತಾರೆ.
ಒಟ್ಟಿನಲ್ಲಿ ಅಂಚೆ ಇಲಾಖೆಯೂ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ, ರಾಜಧಾನಿಯ ಮಾವು ಪ್ರಿಯರಿಗೆ ಸಹಾಯಕವಾಗುತ್ತಿದ್ದು, ಇದರಿಂದ ನೂರಾರು ರೈತರಿಗೆ ಸಹಾಯವಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Sat, 12 April 25







