ಮಾವು ಬೆಳೆಗಾರರಿಗೆ ಮತ್ತೆ ಸಂಕಷ್ಟ: ಏಕಾಏಕಿ ಉದುರಿ ಬೀಳುತ್ತಿರುವ ಕಾಯಿಗಳು
ಧಾರವಾಡದ ಮಾವು ಬೆಳೆಗಾರರು ಸದ್ಯ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಮಾವು ಹೂವು ಬಿಡುವ ಹಂತದಲ್ಲಿಯೇ ಸಂಕಷ್ಟ ಎದುರಾಗಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಮಾವಿನ ಗಿಡಗಳು ವಿಪರೀತ ಚಿಗುರು ಬಿಟ್ಟಿದ್ದು ಹೂ ಸಮೇತ ಮಾವಿನ ಮಿಡಿ ಕಾಯಿಗಳೆಲ್ಲಾ ಉದುರಿ ಬೀಳುತ್ತಿವೆ. ರೈತರು ಸರ್ಕಾರದಿಂದ ಹೆಚ್ಚಿನ ವಿಮೆಗೆ ಒತ್ತಾಯಿಸಿದ್ದಾರೆ.

ಧಾರವಾಡ, ಮಾರ್ಚ್ 03: ರೈತ ತನ್ನ ಯಾವುದೇ ಬೆಳೆ ಇದ್ದರು ಆಯಾ ಬೆಳೆಯ ಹೂವು-ಕಾಯಿಗಳನ್ನು ನೋಡಿಯೇ ಅದು ಎಷ್ಟು ಇಳುವರಿ ಕೊಡಬಲ್ಲದು ಅಂತ ಲೆಕ್ಕ ಹಾಕ್ತಾ ಇರ್ತಾನೆ. ಆದರೆ ಇತ್ತೀಚೆಗೆ ಹವಾಮಾನ ವೈಪರೀತ್ಯಗಳು ರೈತನ ಲೆಕ್ಕಾಚಾರಗಳನ್ನೆ ಬುಡಮೇಲು ಮಾಡಿ ಹಾಕುತ್ತಿವೆ. ಇದೇ ರೀತಿ ಈಗ ಧಾರವಾಡ ಜಿಲ್ಲೆಯ ಮಾವು (mango) ಬೆಳಗಾರರ ರೈತರ ಸ್ಥಿತಿಯಾಗಿದೆ. ಈ ಸಲ ಮಾವು ಚೆನ್ನಾಗಿ ಹೂವು ಬಿಟ್ಟಿತ್ತು. ಒಳ್ಳೆ ಕಾಯಿಗಳು ಶುರುವಾಗಿದ್ದವು. ಆದರೆ ಈಗ ಏಕಾಏಕಿ ಕಾಯಿಗಳು ಉದುರಿ ಬೀಳುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಹೂವು ಬಿಡುವ ಹಂತದಲ್ಲಿಯೇ ಸಂಕಷ್ಟ
ಧಾರವಾಡ ಜಿಲ್ಲೆಯಲ್ಲಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿಯೂ ಧಾರವಾಡದ ಅಲ್ಫಾನ್ಸೋ ಮಾವಿನ ಹಣ್ಣಿಗೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಅನೇಕ ವರ್ಷಗಳಿಂದ ಬೇರೆ ಬೇರೆ ಕಾರಣಕ್ಕೆ ಹೂವು ಬಿಡುವ ಹಂತದಲ್ಲಿಯೇ ಸಂಕಷ್ಟ ಎದುರಿಸುತ್ತಿದ್ದ ಧಾರವಾಡದ ಮಾವಿನ ತೋಟಗಳಿಗೆ ಈ ಸಲ ಈ ಅಂತಹ ಯಾವುದೇ ಆತಂಕವಿರಲಿಲ್ಲ. ಮಾವು ಚೆನ್ನಾಗಿ ಹೂ ಬಿಟ್ಟಿದ್ದು ಮರದಲ್ಲಿ ಕಾಯಿಗಳು ತುಂಬಿಕೊಳ್ಳುತ್ತವೆ ಎಂಬ ನಿರೀಕ್ಷೆ ಬೆಳೆಗಾರರಿಗಿತ್ತು. ಆದರೆ, ಇದೀಗ ಮಾವಿನ ಗಿಡಗಳು ವಿಪರೀತ ಚಿಗುರು ಬಿಟ್ಟಿದ್ದು ಹೂ ಸಮೇತ ಮಾವಿನ ಮಿಡಿ ಕಾಯಿಗಳೆಲ್ಲಾ ಉದುರಿ ಬೀಳುತ್ತಿವೆ.
ಇದನ್ನೂ ಓದಿ: ಅಮರೇಶ್ವರ ಜಾತ್ರೆಯಲ್ಲಿ ಪಶು ಲೋಕ ಅನಾವಣರ: ದೇವಣಿ ಸೇರಿ ನಾನಾ ಜಾತಿಯ ಪಶುಗಳನ್ನ ನೋಡಲು ಮುಗಿಬಿದ್ದ ಜನ
ಮಂಜಿನ ವಾತಾವರಣ ಅಥವಾ ಹವಾಮಾನ ವೈಪರೀತ್ಯದಿಂದ ಇನ್ನಾವುದೇ ರೋಗಕ್ಕೆ ಮಾವು ತುತ್ತಾದರೆ ಹೂ-ಮಿಡಿ ಉದುರುವುದು ಸಾಮಾನ್ಯ. ಅದೂ ತುಸು ಪ್ರಮಾಣ. ಕಳೆದ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಶೇ. 90ರಷ್ಟು ಮಾವಿನ ಗಿಡಗಳು ವಿಪರೀತ ಪ್ರಮಾಣದಲ್ಲಿ ಚಿಗುರು ಬಿಟ್ಟಿವೆ. ಹೀಗಾಗಿ ಮರಗಳು ಚಿಗುರು ಉಳಿಸಿಕೊಳ್ಳಲು ಹೂ ಸಮೇತ ಮಿಡಿಯನ್ನು ದೊಡ್ಡ ಪ್ರಮಾಣದಲ್ಲಿ ಕೈ ಬಿಡುತ್ತಿವೆ. ಇದು ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದಿಟ್ಟಿದೆ.
ಧಾರವಾಡ ಭಾಗದಲ್ಲಿ ಇದೀಗ ಮಾವಿನ ಮರಗಳ ಬುಡದಲ್ಲಿ ಹಳೆಯ ಎಲೆಗಳೊಂದಿಗೆ ಹೂ ಮತ್ತು ಚಿಕ್ಕ ಚಿಕ್ಕ ಮಾವಿನ ಮಡಿಗಳು ಉದುರಿ ಬಿದ್ದಿರುವ ದೃಶ್ಯಗಳೇ ಕಾಣುತ್ತಿವೆ. ಮರಗಳು ಹೊಸ ಚಿಗುರಿನಿಂದ ಅಂದವಾಗಿ ಕಂಡರೂ ಬುಡದಲ್ಲಿ ಹೂ ಮತ್ತು ಮಿಡಿಗಳು ಶಕ್ತಿ ಕಳೆದುಕೊಂಡು ಬಿದ್ದಿದ್ದು, ಈ ಬಾರಿಯೂ ಇಳುವರಿಯಲ್ಲಿ ವಿಪರೀತ ಹೊಡೆತ ಬೀಳುವ ಆತಂಕದಲ್ಲಿ ಮಾವು ಬೆಳೆಗಾರರಿದಾರೆ.
ಅಧಿಕ ವಿಮೆಗೆ ಆಗ್ರಹ
ಇದೇ ಮೊದಲ ಬಾರಿಗೆ ಮಾವಿನ ಗಿಡಗಳು ಇಷ್ಟೊಂದು ಪ್ರಮಾಣದಲ್ಲಿ ಚಿಗುರಿ ನಿಂತಿವೆ. ಸಾಮಾನ್ಯವಾಗಿ ಹೂ ಬಿಡುವ ಮೊದಲೇ ಚಿಗುರು ಬಿಟ್ಟರೆ ಆ ವರ್ಷ ಆ ಮಾವಿನ ಗಿಡ ಹೂವು ಬಿಡೋದಿಲ್ಲ ಅಂತಾ ಇಳುವರಿಯ ನಿರೀಕ್ಷೆಯನ್ನೇ ರೈತರು ಕೈ ಬಿಡ್ತಾರೆ. ಆದರೆ ಇದೇ ಮೊದಲ ಸಲ ಹೂವು ಬಿಟ್ಟು ಕಾಯಿ ಆಗುವ ಹಂತದಲ್ಲಿ ಚಿಗುರು ಶುರುವಾಗಿದ್ದು, ಉದುರಿ ಬೀಳುವ ಕಾಯಿಗಳನ್ನು ಆಯ್ದು ರೈತರು ಮರುಕ ಪಟ್ಟುಕೊಳ್ಳುತ್ತಿದ್ದಾರೆ. ಈ ಸಲ ಶೇ. 10 ರಷ್ಟು ಸಹ ಇಳುವರಿ ಇಲ್ಲ ಅನ್ನೋ ಆತಂಕ ಎದುರಾಗಿದ್ದು, ಸರ್ಕಾರ ಬೆಳಗಾರರಿಗೆ ಅಧಿಕ ವಿಮೆ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಸಂಪ್ರದಾಯಿಕ ಬೆಳೆಗೆ ಗುಡ್ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಒಟ್ಟಾರೆಯಾಗಿ ಮಾವಿನ ಬೆಳೆಯ ವಿಷಯದಲ್ಲಿ ಬೆಳೆಗಾರರಿಗೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಮರಗಳಲ್ಲಿ ಕಾಯಿ ಪ್ರಮಾಣ ನೋಡಿ ಖುಷಿ ಪಟ್ಟಿದ್ದ ರೈತರು ಈಗ ಕಣ್ಣೀರು ಹಾಕುವಂತಾಗಿದ್ದು, ವಿಪರ್ಯಾಸವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:11 pm, Mon, 3 March 25