Karnataka Caste Census: ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್
ಸಾಕಷ್ಟು ಪರ-ವಿರೋಧದ ಮಧ್ಯೆ ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ. ಜಾತಿ ವಿವರಗಳನ್ನು ಒಳಗೊಂಡ ಈ ವರದಿ, 54 ಮಾನದಂಡಗಳನ್ನು ಆಧರಿಸಿದೆ. 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಈ ವರದಿಯನ್ನು ಈಗ ಪರಿಶೀಲಿಸಲಾಗುತ್ತಿದೆ.

ಬೆಂಗಳೂರು, ಏಪ್ರಿಲ್ 10: ಸಾಕಷ್ಟು ಪರ-ವಿರೋಧದ ನಡುವೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 (Caste Census Report) ದತ್ತಾಂಶಗಳ ಅಧ್ಯಯನ ವರದಿ ಮಂಡನೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ (Cabinet Meeting) ಜಾತಿ ಜನಗಣತಿ ಸಮೀಕ್ಷಾ ವರದಿ ಮಂಡನೆಯಾಗಲಿದೆ. ಹಿಂದುಳಿದ ವರ್ಗಗಳ ಆಯೋಗವೂ ಕಳೆದ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿಯ ಲಕೋಟೆಯನ್ನು ತೆರೆದು ಪರೀಶೀಲಿಸಲು ಅನುಮೋದನೆ ಕೋರಿ ಮಂಡನೆಗೆ ಪ್ರಸ್ತಾಪಿಸಲಾಗಿದೆ.
ಹೆಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಕಳೆದ 2015 ರ ಏಪ್ರಿಲ್ 11ರಿಂದ ಮೇ. 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗಿತ್ತು. ಆ ಮೂಲಕ ಜಾತಿ ವಿವರವೂ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.
ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಿಷ್ಟು
2015 ರ ಸಮೀಕ್ಷೆಯ ಆಧಾರದ ಮೇಲೆ 2024ರ ಅಂತಿಮ ವರದಿಯನ್ನು ಸಲ್ಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ನಾನು ಎಲ್ಲವನ್ನೂ ಸಲ್ಲಿಸಿದ್ದು, ಇದೀಗ ನಾನು ಕೂಡ ಕಾಯುತ್ತಿದ್ದೇನೆ. ಸರ್ಕಾರ ಅದನ್ನು ಕೈಗೆತ್ತಿಕೊಂಡರೆ, ನನಗೆ ಸಂತೋಷವಾಗುತ್ತದೆ. ಸದ್ಯ ಚೆಂಡು ಅವರ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ: ಸಿದ್ದರಾಮಯ್ಯ ಗ್ಯಾರಂಟಿ ಮಾತು!
ಇನ್ನು ಈ ಬಗ್ಗೆ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಪ್ರತಿಕ್ರಿಯಿಸಿದ್ದು, ನಾವು ಕಾಂತರಾಜ್ ವರದಿಯನ್ನು ವಿರೋಧಿಸುತ್ತೇವೆ. ಇದು ಅವೈಜ್ಞಾನಿಕವಾಗಿದೆ. ನಾವು ಏಳು ವೀರಶೈವ-ಲಿಂಗಾಯತ ಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದೇವೆ. ಆ ಮೂಲಕ ನಮ್ಮ ಸಮುದಾಯದ ಹಿತಾಸಕ್ತಿಗಳಿಗೆ ಹಾನಿ ಉಂಟಾದರೆ, ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ನಾವು ಬೀದಿಗಿಳಿಯುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
2016ರಲ್ಲಿ ಜಾತಿ ಜನಗಣತಿ ವರದಿಯ ವಿರುದ್ಧ ನಡೆದಿದ್ದ ಪ್ರತಿಭಟನೆಗಳಲ್ಲಿ ನೇತೃತ್ವ ವಹಿಸಿದ್ದ ಒಕ್ಕಲಿಗ ಕ್ರಿಯಾ ಸಮಿತಿ ನಾಯಕ ಕೆ.ಜಿ. ಕುಮಾರ್ ಈ ಬಗ್ಗೆ ಮಾತನಾಡಿದ್ದು, ಈ ವರದಿ ಅವೈಜ್ಞಾನಿಕವಾಗಿದೆ. ಇದನ್ನು ಅಂಗೀಕರಿಸಿದರೆ, ನಾವು ಮೊದಲಿನಂತೆಯೇ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ: ಸಿದ್ದರಾಮಯ್ಯ
ಸದ್ಯ ಕೆಲ ಪ್ರಬಲ ಸಮುದಾಯಗಳ ತೀವ್ರ ಪ್ರತಿರೋಧದ ಮಧ್ಯೆ ಸರ್ಕಾರವು ವರದಿ ಮಂಡನೆಗೆ ಮುಂದಾಗಿದೆ. ನಾಳೆ ನಡೆಯುವ ಕ್ಯಾಬಿನೆಟ್ ಮೀಟಿಂಗ್ನಲ್ಲೂ ಸಚಿವರ ನಡುವೆ ಪರ ವಿರೋಧದ ಚರ್ಚೆ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Thu, 10 April 25