ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕ ವರದಿ ರೂಪಿಸಿ: ಅಶೋಕ್ ಆಗ್ರಹ
ಬಿಜೆಪಿ ನಾಯಕ ಆರ್. ಅಶೋಕ್ ಅವರು ಕರ್ನಾಟಕದ ಜಾತಿ ಗಣತಿ ವರದಿಯನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಮತಗಳನ್ನು ಗಳಿಸಲು ಈ ವರದಿಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವರದಿ ಅವೈಜ್ಞಾನಿಕವಾಗಿದ್ದು, ಪುನರ್ ಪರಿಶೀಲನೆ ಅಗತ್ಯ ಎಂದು ಅವರು ಆಗ್ರಹಿಸಿದ್ದಾರೆ. ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯಗಳ ನಿರ್ಲಕ್ಷ್ಯವನ್ನು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 13: ಕೇವಲ ಮುಸ್ಲಿಮರನ್ನು (Muslim) ವೋಟ್ ಬ್ಯಾಂಕ್ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ಬೇರೆ ಮಾಡಿಲ್ಲ. ಒಕ್ಕಲಿಗರಲ್ಲೇ ಕೆಲವು ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಪಕ್ಷ, ಜಾತಿ, ಧರ್ಮ ಒಡೆಯುವುದರಲ್ಲಿ ನಂ.1 ಆಗಿದ್ದಾರೆ. ಸಿದ್ದರಾಮಯ್ಯ ಪ್ರಾಯೋಜಿತವಾದ ಈ ವರದಿ ಅವೈಜ್ಞಾನಿಕ. ಲಕ್ಷಾಂತರ ಜನರ ಮನೆಗೆ ಹೋಗದೆ ವರದಿ ಬರೆಯಲಾಗಿದೆ. ಕರ್ನಾಟಕ ತಂತ್ರಜ್ಞಾನದಲ್ಲೇ ನಂ.1 ಆಗಿದೆ. ಇದನ್ನು ಬಳಸಿಕೊಂಡು ವರದಿ ಮಾಡಬಹುದಿತ್ತು. ಆದರೂ ತಮಗೆ ಬೇಕಾದಂತೆ ವರದಿ ಬರೆಸಿದ್ದಾರೆ ಎಂದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಹಳೆ ಕಾಂಗ್ರೆಸ್. ಈಗಿನ ಕಾಂಗ್ರೆಸ್ನಲ್ಲಿ ಹಳಬರು ಇಲ್ಲ. ಈ ಕಾಂಗ್ರೆಸ್ ಒಕ್ಕಲಿಗರು, ಲಿಂಗಾಯತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈಗಲೂ ಸಮಯವಿದೆ. ಆರು ತಿಂಗಳು ತಡವಾದರೂ ಪರವಾಗಿಲ್ಲ. ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವರದಿಯನ್ನು ಮತ್ತೆ ರೂಪಿಸಲಿ ಎಂದು ಆಗ್ರಹಿಸಿದರು.
ಈ ವರದಿಗೆ 150 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಅಧಿಕಾರಿ ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಡಿಕ್ಟೇಶನ್ ಮಾಡಿಸಿ ವರದಿ ಬರೆಸಿದ್ದಾರೆ. ಬಳಿಕ ಕಾಂತರಾಜು ಸಹಿ ಹಾಕದೆ ಓಡಿದ್ದಾರೆ. ಈ ಹಣವನ್ನು ಯಾರು ತಿಂದಿದ್ದಾರೆ ಎಂದು ತನಿಖೆ ಮಾಡಬೇಕಿದೆ. ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ವರದಿ ಮಾಡಲಾಗಿದೆ ಎಂದರು.
ಹಳ್ಳಿಕಾರ್, ಕುಂಚಿಟಿಗರನ್ನು ಬೇರೆ ಮಾಡಲಾಗಿದೆ. ರೆಡ್ಡಿ ಲಿಂಗಾಯತರನ್ನು ಪ್ರತ್ಯೇಕ ಮಾಡಲಾಗಿದೆ. ಇಂತಹ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದನ್ನು ಸಚಿವರು ಒಪ್ಪಿದರೆ ಆಯಾ ಸಮುದಾಯದ ಜನರು ಅವರನ್ನು ಒಪ್ಪುವುದಿಲ್ಲ. ಈ ವರದಿಯಿಂದಾಗಿ ಕಾಂಗ್ರೆಸ್ನಲ್ಲೇ ದಂಗೆ ಆರಂಭವಾಗಲಿದೆ. ಸಮುದಾಯಗಳ ಜನರು ಮುಂದಿನ ಚುನಾವಣೆಯಲ್ಲಿ ಇವರನ್ನು ಹತ್ತಿರ ಸೇರಿಸುವುದಿಲ್ಲ. ಒಕ್ಕಲಿಗ ಸ್ವಾಮೀಜಿಯವರು ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇದೇ ರೀತಿ ಬೇರೆ ಸಮುದಾಯದವರೂ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರರು ಸ್ಥಾಪಿಸಿದ್ದರು. ಆದರೆ ಬಳಿಕ ಇಟಲಿ ಮೂಲದ ಸೋನಿಯಾ ಗಾಂಧಿ ಹಾಗೂ ಮಕ್ಕಳು 5 ಸಾವಿರ ಕೋಟಿ ಆಸ್ತಿ ಲೂಟಿ ಮಾಡಿದ್ದಾರೆ. ಅದು ದೇಶದ ಆಸ್ತಿಯೇ ಹೊರತು, ಇಟಲಿಯ ಆಸ್ತಿಯಲ್ಲ. ಈ ನಿಟ್ಟಿನಲ್ಲಿ ಇಡಿ ಉತ್ತಮ ಕೆಲಸ ಮಾಡಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲಾತಿ ನೀಡಿದ್ದಾರೆ. ಆದರೆ ಮುಸ್ಲಿಮರಿಗೆ ಮೀಸಲಾತಿ ನೀಡಲು ರಾಜ್ಯಕ್ಕೆ ಅಧಿಕಾರವಿಲ್ಲ. ಜೊತೆಗೆ ಒಟ್ಟು ಮೀಸಲಾತಿ 50% ಗಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ. ಹೆಚ್ಚಿನ ಮೀಸಲಾತಿಯನ್ನು ಯಾವ ಕಾನೂನಿನಡಿ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಲಿ. ಬಿಜೆಪಿ ಇದ್ದಾಗ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ತೆಗೆದು ಬೇರೆಯವರಿಗೆ ನೀಡಲಾಗಿತ್ತು ಎಂದರು.
ಇದನ್ನೂ ಓದಿ: ಒಬಿಸಿ ವರ್ಗೀಕರಣದಲ್ಲಿ ಬದಲಾವಣೆ, ಮೀಸಲಾತಿ ಶೇ 51ಕ್ಕೆ ಹೆಚ್ಚಿಸಲು ಜಾತಿ ಗಣತಿ ವರದಿಯಲ್ಲಿ ಶಿಫಾರಸು
ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ವಿರುದ್ಧವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಹಾಲಿನ ದರ, ಡೀಸೆಲ್, ವಿದ್ಯುತ್ ಮೊದಲಾದ ದರಗಳನ್ನು ಕಾಂಗ್ರೆಸ್ ಏರಿಸಿದೆ. ಕಾಂಗ್ರೆಸ್ ಎಲ್ಲೂ ದರ ಇಳಿಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಪಾರ್ಕಿಂಗ್, ಕಸ ಶುಲ್ಕ ಮಾಡಲಾಗಿದೆ. ಬೆಂಗಳೂರಿನ ಜನರನ್ನು ತೆರಿಗೆಯಿಂದಲೇ ಹಿಂಡುತ್ತಿದ್ದಾರೆ ಎಂದರು.