ಕೊಲ್ಕತ್ತಾ ಕೊಲೆ ಪ್ರಕರಣದಲ್ಲಿ ಪರಿಹಾರ ಮೊತ್ತ ಘೋಷಿಸಿದ ಕೋರ್ಟ್; ಹಣವಲ್ಲ ನ್ಯಾಯ ಬೇಕೆಂದ ವೈದ್ಯೆಯ ಪೋಷಕರು

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿರುವ ಆರ್​ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ಕೋರ್ಟ್ ಅಪರಾಧಿ ಸಂಜಯ್ ರಾಯ್​ಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ಜೊತೆಗೆ 50,000 ರೂ. ದಂಡ ವಿಧಿಸಿದೆ. ಅಲ್ಲದೆ, ಮೃತ ವೈದ್ಯೆಯ ಪೋಷಕರಿಗೆ ಪರಿಹಾರ ರೂಪದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಒಟ್ಟು 17 ಲಕ್ಷ ರೂ. ಪರಿಹಾರ ನೀಡಬೇಕೆಂದು ಸೂಚಿಸಿದೆ.

ಕೊಲ್ಕತ್ತಾ ಕೊಲೆ ಪ್ರಕರಣದಲ್ಲಿ ಪರಿಹಾರ ಮೊತ್ತ ಘೋಷಿಸಿದ ಕೋರ್ಟ್; ಹಣವಲ್ಲ ನ್ಯಾಯ ಬೇಕೆಂದ ವೈದ್ಯೆಯ ಪೋಷಕರು
Rg Kar Hospital Murder Case

Updated on: Jan 20, 2025 | 5:27 PM

ಕೊಲ್ಕತ್ತಾ: ಕೊಲ್ಕತ್ತಾದ ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹಾಗೇ, ಮೃತ ವೈದ್ಯೆಯ ಪೋಷಕರಿಗೆ ಸರ್ಕಾರ 10 ಲಕ್ಷ ಮತ್ತು 7 ಲಕ್ಷ ಪರಿಹಾರ ನೀಡಬೇಕೆಂದೂ ಸೂಚಿಸಿದೆ. ಆದರೆ, ಕೋರ್ಟ್​ನ ತೀರ್ಪು ಕೇಳಿ ಕಣ್ಣೀರಿಟ್ಟ ಮೃತ ಯುವತಿಯ ಪೋಷಕರು, “ನಮಗೆ ಪರಿಹಾರ ಬೇಡ, ನಮಗೆ ನ್ಯಾಯ ಬೇಕು” ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನಿಮಗಾದ ನಷ್ಟವನ್ನು ನಾವು ಹಣದಿಂದ ಅಳೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯೆಗೆ ಭದ್ರತೆ ಒದಗಿಸಬೇಕಾಗಿದ್ದುದು ಸರ್ಕಾರದ ಕರ್ತವ್ಯ. ಹೀಗಾಗಿ, ಸರ್ಕಾರಕ್ಕೆ ನಾವು ವಿಧಿಸಿರುವ ದಂಡವಿದು ಎಂದು ಹೇಳಿದೆ.

ಆರ್‌ಜಿ ಕರ್ ಪ್ರಕರಣದಲ್ಲಿ ಇಂದು ಸೀಲ್ಡಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ಅನಿರ್ಬನ್ ದಾಸ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇದರೊಂದಿಗೆ 50,000 ರೂ. ದಂಡ ವಿಧಿಸಲಾಗಿದ್ದು, ಇನ್ನೂ 5 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದೆ. ಮೃತ ವೈದ್ಯೆಯ ಕುಟುಂಬಕ್ಕೆ 10 ಲಕ್ಷ ರೂ. ಮತ್ತು 7 ಲಕ್ಷ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಕರ್ತವ್ಯದಲ್ಲಿರುವಾಗ ಅತ್ಯಾಚಾರಕ್ಕೆ ಒಳಗಾಗಿದ್ದಕ್ಕೆ ಪಶ್ಚಿಮ ಬಂಗಾಳ ರಾಜ್ಯವು 7 ಲಕ್ಷ ರೂ. ಮತ್ತು ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ್ದಕ್ಕೆ 10 ಲಕ್ಷ ರೂ. ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸಿದೆ.

ಇದನ್ನೂ ಓದಿ: ನಾನು ಮುಗ್ಧ ಎಂದ ಆರ್‌ಜಿ ಕರ್ ಕೊಲೆ ಪ್ರಕರಣ ಆರೋಪಿ, ಭಾವುಕರಾದ ವೈದ್ಯೆಯ ತಂದೆ; ಇಂದು ಕೋರ್ಟ್​ನಲ್ಲಿ ನಡೆದಿದ್ದೇನು?

ಇದನ್ನು ಕೇಳಿದ ಮೃತ ವೈದ್ಯೆಯ ಪೋಷಕರು, ‘ನನಗೆ ಪರಿಹಾರ ಬೇಡ’ ಎಂದು ಹೇಳಿದರು. ನಂತರ ನ್ಯಾಯಾಧೀಶರು, “ಸಾವು ಸಂಭವಿಸಿದ ರೀತಿಯನ್ನು ನೋಡಿದರೆ ಪರಿಹಾರದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಹಣ ನೀಡುತ್ತಿದ್ದೇನೆ ಎಂದು ಭಾವಿಸಬೇಡಿ. ಆದರೆ ಭದ್ರತೆ ಒದಗಿಸುವುದು ರಾಜ್ಯದ ಜವಾಬ್ದಾರಿ. ಹೀಗಾಗಿ, ಇದು ದಂಡ.” ಎಂದಿದ್ದಾರೆ.


ತಮ್ಮ ಮಗಳ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದನಿಗೆ ಜೀವಾವಧಿ ಶಿಕ್ಷೆ ನೀಡಿರುವುದಕ್ಕೆ ವೈದ್ಯೆಯ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ. ಆತನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿರುವ ಅವರು “ಅಂತಹ ಜನರಿಗೆ ಬದುಕುವ ಹಕ್ಕಿಲ್ಲ” ಎಂದು ಹೇಳಿದ್ದಾರೆ. ಆದರೆ, ನ್ಯಾಯಾಲಯ ಇಂದು ಮರಣದಂಡನೆ ವಿಧಿಸಲಿಲ್ಲ. ನ್ಯಾಯಾಧೀಶರು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ತೀರ್ಪನ್ನು ಕೇಳಿದ ನಂತರ ಮೃತ ವೈದ್ಯೆಯ ಪೋಷಕರು ನ್ಯಾಯಾಲಯದಲ್ಲಿ ಅಳುತ್ತಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ