ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣ; ಗಲ್ಲು ಶಿಕ್ಷೆ ನೀಡಲು ಇದು ಅತ್ಯಪರೂಪದ ಕೇಸಲ್ಲ ಎಂದ ಕೋರ್ಟ್

|

Updated on: Jan 20, 2025 | 7:57 PM

ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಸಂಜಯ್ ರಾಯ್ ಅಪರಾಧಿ ಎಂದು ಘೋಷಣೆಯಾಗಿದೆ. ಆತನಿಗೆ ಕೋರ್ಟ್ ಇಂದು ಜೀವಾವಧಿ ಶೀಕ್ಷೆಯನ್ನೂ ಘೋಷಿಸಿದೆ. ಆದರೆ, ಆತನಿಗೆ ಜೀವಾವಧಿ ಶಿಕ್ಷೆಯ ಬದಲು ಗಲ್ಲು ಶಿಕ್ಷೆ ನೀಡಬೇಕಾಗಿತ್ತು ಎಂಬ ಒತ್ತಾಯವೂ ಕೇಳಿಬಂದಿದೆ.

ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣ; ಗಲ್ಲು ಶಿಕ್ಷೆ ನೀಡಲು ಇದು ಅತ್ಯಪರೂಪದ ಕೇಸಲ್ಲ ಎಂದ ಕೋರ್ಟ್
Kolkata Murder
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಆರ್​ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅಪರಾಧಿಗೆ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿಚಾರಣೆ ನಡೆಸುವಾಗ ಸೀಲ್ಡಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್, ಈ ಅಪರಾಧವು “ತೀರಾ ಅಪರೂಪ” ವರ್ಗದ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ, ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಾದ ಮಹತ್ವದ ಬೆಳವಣಿಗೆಯಲ್ಲಿ, ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ದೋಷಿ ಎಂದು ಸಾಬೀತಾದ ನಂತರ ಕೊಲ್ಕತ್ತಾದ ಸ್ಥಳೀಯ ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ವಿಧಿಸಿತು.

ಇದನ್ನೂ ಓದಿ: ಕೊಲ್ಕತ್ತಾ ಕೊಲೆ ಪ್ರಕರಣದಲ್ಲಿ ಪರಿಹಾರ ಮೊತ್ತ ಘೋಷಿಸಿದ ಕೋರ್ಟ್; ಹಣವಲ್ಲ ನ್ಯಾಯ ಬೇಕೆಂದ ವೈದ್ಯೆಯ ಪೋಷಕರು

ಸೆಕ್ಷನ್ 64ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶ ದಾಸ್ ತಿಳಿಸಿದ್ದಾರೆ. ದಂಡ ಪಾವತಿಸದಿದ್ದರೆ ಹೆಚ್ಚುವರಿ 5 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ 9ರಂದು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ವಿರುದ್ಧ ನಡೆದ ಅಪರಾಧಕ್ಕೆ ಸಂಜಯ್ ರಾಯ್ ತಪ್ಪಿತಸ್ಥರೆಂದು ನ್ಯಾಯಾಧೀಶ ದಾಸ್ ಶನಿವಾರ ತೀರ್ಪು ನೀಡಿದ್ದರು. ಇದು ದೇಶಾದ್ಯಂತ ದೀರ್ಘಕಾಲದ ಪ್ರತಿಭಟನೆಗಳಿಗೆ ಕಾರಣವಾಯಿತು.

ಸೆಕ್ಷನ್ 103(1)ರ ಅಡಿಯಲ್ಲಿ, ಸಂಜಯ್ ರಾಯ್‌ಗೆ 50,000 ರೂ. ದಂಡದೊಂದಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ಪಾವತಿಸದಿದ್ದರೆ ಇನ್ನೂ 5 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಆತನಿಗೆ ಮರಣದಂಡನೆ ವಿಧಿಸಬೇಕೆಂದು ಸಿಬಿಐ ಒತ್ತಾಯಿಸಿತ್ತು. “ಮರಣದಂಡನೆ ಶಿಕ್ಷೆಯ ಬದಲು ಜೈಲು ಶಿಕ್ಷೆ ವಿಧಿಸಬೇಕೆಂದು ಪ್ರತಿವಾದಿ ವಕೀಲರು ಕೋರಿದರು. ಈ ಅಪರಾಧವು ಅತ್ಯಪರೂಪದ ವರ್ಗಕ್ಕೆ ಸೇರುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.


ಮೃತ ವೈದ್ಯರ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ಪಶ್ಚಿಮ ಬಂಗಾಳ ರಾಜ್ಯಕ್ಕೆ ನಿರ್ದೇಶನ ನೀಡಿತು. “ಆ ವೈದ್ಯೆ ತನ್ನ ಕೆಲಸದ ಸ್ಥಳವಾದ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ ಕಾರಣ, ವೈದ್ಯರ ಕುಟುಂಬಕ್ಕೆ ಪರಿಹಾರವನ್ನು ಪಾವತಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಆಕೆಯ ಸಾವಿಗೆ 10 ಲಕ್ಷ ರೂ. ಮತ್ತು ಅತ್ಯಾಚಾರಕ್ಕೆ 7 ಲಕ್ಷ ರೂ. ದಂಡ ನೀಡಬೇಕು” ಎಂದು ಕೋರ್ಟ್ ಹೇಳಿದೆ.

ಈ ನಿರ್ಧಾರದ ವಿರುದ್ಧ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ಸಂಜಯ್ ರಾಯ್ ಅವರಿಗೆ ಇದೆ. ಅಗತ್ಯವಿದ್ದರೆ ಅವರಿಗೆ ಕಾನೂನು ನೆರವು ನೀಡಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ