ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ, ನಾಥೂರಾಂ ಗೋಡ್ಸೆಯನ್ನು ಶ್ಲಾಘಿಸಿದ್ದ ಹಿಂದು ಗುರು ಕಾಳಿಚರಣ್ ಮಹಾರಾಜ್ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಅವರ ಬಿಡುಗಡೆಗಾಗಿ ಆಗ್ರಹ ಕೇಳಿಬರುತ್ತಿದೆ. ಕಾಳಿ ಚರಣ್ ಮಹಾರಾಜ್ ಬಿಡುಗಡೆಗೆ ಆಗ್ರಹಿಸಿ ಹಲವು ಬಲಪಂಥೀಯ ಸಂಘಟನೆಗಳು ನಿನ್ನೆ ಪ್ರತಿಭಟನೆಯನ್ನೂ ನಡೆಸಿದ್ದವು. ಅಷ್ಟೇ ಅಲ್ಲ, ಎಐಎಂಐಎಂ ಮುಖ್ಯಸ್ಥರ ಅಸಾದುದ್ದೀನ್ ಓವೈಸಿಯನ್ನು ಬಂಧಿಸಿದರೆ, ಪೊಲೀಸರಿಗೆ 22 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.
ಕಾಳಿ ಚರಣ್ ರಾಯ್ಪುರದಲ್ಲಿ ಡಿಸೆಂಬರ್ 26ರಂದು ನಡೆದ ಧರ್ಮ ಸಂಸದ್ನಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ವೇಳೆ ಮಹಾತ್ಮ ಗಾಂಧಿಯವರನ್ನು ಅವಹೇಳನ ಮಾಡಿ, ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೋಡ್ಸೆಯನ್ನು ಶ್ಲಾಘಿಸಿದ್ದರು. ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ. ನಾವು ಕಟ್ಟಾ ಹಿಂದು ನಾಯಕನ ನೇತೃತ್ವದ ಸರ್ಕಾರವನ್ನೇ ಆಯ್ಕೆ ಮಾಡಬೇಕು. ಇಸ್ಲಾಂ ನಮ್ಮ ಕಣ್ಣ ಮುಂದೆಯೇ, ಅಫ್ಘಾನಿಸ್ತಾನ, ಇರಾನ್, ಇರಾಕ್ಗಳನ್ನು ವಶಪಡಿಸಿಕೊಂಡಿತು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಿಸುತ್ತೇನೆ ಎಂದು ಹೇಳಿದ್ದರು. ಅದಾದ ನಂತರ ಮಧ್ಯಪ್ರದೇಶದ ಖುಜರಾಹೋದ ಭಾಗೇಶ್ವರ ಗ್ರಾಮದಲ್ಲಿ ತಂಗಿದ್ದ ಅವರನ್ನು ಮುಂಜಾನೆ 4ಗಂಟೆ ಹೊತ್ತಿಗೆ ಪೊಲೀಸರು ಬಂಧಿಸಿದ್ದರು.
ಕಾಳಿ ಚರಣ್ ಬಿಡುಗಡೆಗಾಗಿ ಹಿಂದುಪರ ಸಂಘಟನೆಗಳು ಆಗ್ರಹಿಸುತ್ತಿವೆ. ನಿನ್ನೆ ದೆಹಲಿಯ ಟ್ಯಾಂಕ್ ಪಾರ್ಕ್ ಬಳಿಯಿರುವ ಡೆಪ್ಯೂಟಿ ಕಮಿಷನರ್ ನಿವಾಸದ ಬಳಿ ಸೇರಿದ ಬಲಪಂಥೀಯರು, ಮಿನಿ ಸೆಕ್ರೆಟರಿಯೇಟ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಳಿಚರಣ್ರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು. ಹಿಂದು ಸಂತರು, ದಾರ್ಶನಿಕರಿಗೆ ಹೀಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಕಾಳಿ ಚರಣ್ರನ್ನು ಬೇಕೆಂದೇ, ಯಾವುದೋ ಯೋಜನೆಯನ್ನು ಇಟ್ಟುಕೊಂಡೇ ಬಂಧಿಸಲಾಗಿದೆ. ಒವೈಸಿ ಇಷ್ಟೆಲ್ಲ ಮಾತನಾಡುತ್ತಾರೆ, ಆದರೆ ಪೊಲೀಸರು, ಸರ್ಕಾರ ಯಾಕೆ ಅವರನ್ನು ಬಂಧಿಸುವುದಿಲ್ಲ ಎಂದು ಹಿಂದು ನಾಯಕ, ವಕೀಲ ಕುಲಭೂಷಣ್ ಯಾದವ್ ಭಾರದ್ವಾಜ್ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಓವೈಸಿಯನ್ನು ಬಂಧಿಸಿದರೆ, ಆ ಪೊಲೀಸರಿಗೆ 22 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು. ಈ ಸಂಘಟನೆಗಳು ನಾಯಬ್ ತಹಸೀಲ್ದಾರ್ ಸುಶೀಲ್ ಕುಮಾರ್ಗೆ, ಎರಡು ಬೇಡಿಕೆಗಳನ್ನು ಒಳಗೊಂಡ ಜ್ಞಾಪನ ಪತ್ರವನ್ನೂ ಸಲ್ಲಿಸಿದ್ದಾರೆ.
ಅಸಾದುದ್ದೀನ್ ಓವೈಸಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದರ ವಿರುದ್ಧ ಹಿಂದೂಪರ ಸಂಘಟನೆಗಳು, ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓವೈಸಿ, ಹಿಂದೂ ಧರ್ಮದ ಪಾಲಿಗೆ ದೊಡ್ಡ ಅಪಾಯ ಎಂದೂ ಹೇಳಿದ್ದಾರೆ. ಹಾಗೇ, ಕಾಳಿ ಚರಣ್ರನ್ನು ಬಂಧಿಸುವ ನೀವು ಓವೈಸಿಯನ್ನು ಯಾಕೆ ಬಂಧಿಸಲಾರಿರಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Stampede at vaishno devi Temple: ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ, 12 ಭಕ್ತರ ಸಾವು
Published On - 7:20 am, Sat, 1 January 22