Haridwar Hate Speech: ದೇಶದ ಏಕತೆಗೆ ಭಂಗ ಬಂದೀತು: ಹರಿದ್ವಾರ ದ್ವೇಷ ಭಾಷಣ ಖಂಡಿಸಿ, ಐವರು ಸೇನಾ ಮುಖ್ಯಸ್ಥರು ಸೇರಿ ನೂರಾರು ಮಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

Haridwar Hate Speech: ದೇಶದ ಏಕತೆಗೆ ಭಂಗ ಬಂದೀತು: ಹರಿದ್ವಾರ ದ್ವೇಷ ಭಾಷಣ ಖಂಡಿಸಿ, ಐವರು ಸೇನಾ ಮುಖ್ಯಸ್ಥರು ಸೇರಿ ನೂರಾರು ಮಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ
ಯತಿ ನರಸಿಂಘಾನಂದ ಸರಸ್ವತಿ

ಹರಿದ್ವಾರದ ಧರ್ಮಸಂಸತ್ ದ್ವೇಷಭಾಷಣವನ್ನು ಖಂಡಿಸಿ ಸಶಸ್ತ್ರಪಡೆಗಳ ಐವರು ಮಾಜಿ ಮುಖ್ಯಸ್ಥರು ಸೇರಿದಂತೆ ನೂರಾರು ಮಂದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 31, 2021 | 10:33 PM

ದೆಹಲಿ: ಹರಿದ್ವಾರದ ಧರ್ಮಸಂಸತ್ ದ್ವೇಷಭಾಷಣವನ್ನು ಖಂಡಿಸಿ ಸಶಸ್ತ್ರಪಡೆಗಳ ಐವರು ಮಾಜಿ ಮುಖ್ಯಸ್ಥರು ಸೇರಿದಂತೆ ನೂರಾರು ಮಂದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಹಿರಿಯ ಅಧಿಕಾರಿಗಳು, ನಿವೃತ್ತರು ಮತ್ತು ಪ್ರಭಾವಿ ನಾಗರಿಕರು ಸೇರಿದ್ದಾರೆ. ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದಿದ್ದ ಧರ್ಮ ಸಂಸತ್ ಸಭೆಯಲ್ಲಿ ಭಾರತೀಯ ಮುಸ್ಲಿಮರ ಜನಾಂಗೀಯ ಹತ್ಯೆಗೆ ಬಹಿರಂಗವಾಗಿ ಕರೆನೀಡಲಾಗಿತ್ತು. ಕ್ರಿಶ್ಚಿಯನ್ನರು, ದಲಿತರು ಮತ್ತು ಸಿಖ್ಖರನ್ನು ಗುರಿಯಾಗಿಸುವ ಪ್ರಯತ್ನಗಳ ಬಗ್ಗೆಯೂ ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಭಾರತದ ಗಡಿಗಳಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆಯೂ ಪತ್ರ ಗಮನಸೆಳೆದಿದೆ. ಭಾರತದೊಳಗೆ ಸಮುದಾಯಗಳಲ್ಲಿ ಬಿರುಕು ಮೂಡಿದರೆ, ಕೋಮುಸೌಹಾರ್ದಕ್ಕೆ ಧಕ್ಕೆ ಬಂದರೆ ಬಾಹ್ಯಶಕ್ತಿಗಳು ದುರ್ಲಾಭ ಪಡೆಯಬಹುದು ಎಂದು ಎಚ್ಚರಿಸಿದ್ದಾರೆ. ‘ದೇಶದೊಳಗಿನ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಒದಗಿದರೆ ಗಡಿಯಾಚೆಗೆ ಕಾದುಕುಳಿತಿರುವ ಬಾಹ್ಯ ಶಕ್ತಿಗಳಿಗೆ ಹೊಸ ಹುಮ್ಮಸ್ಸು ಬರಬಹುದು. ಸಮವಸ್ತ್ರದಲ್ಲಿರುವ ನಮ್ಮ ಸಿಬ್ಬಂದಿಯ ನಡುವೆಯೂ ಬಿರುಕು ಮೂಡಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಶಸ್ತ್ರಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯ ಸ್ಥೈರ್ಯದ ಮೇಲೆಯೂ ಇದು ಪರಿಣಾಮ ಬೀರಬಹುದು. ಭಾರತಂಥ ಬಹುತ್ವ ಸಮಾಜದಲ್ಲಿ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಮೇಲೆ ಎತ್ತಿಕಟ್ಟುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹರಿದ್ವಾರದ ಧರ್ಮ ಸಂಸತ್​ ಕಾರ್ಯಕ್ರಮವನ್ನು ನೇರವಾಗಿ ಉಲ್ಲೇಖಿಸಿರುವ ಪತ್ರವು, ‘ಡಿಸೆಂಬರ್ 17ರಿಂದ 19ರವರೆಗೆ ಹರಿದ್ವಾರದಲ್ಲಿ ನಡೆದ ಮೂರು ದಿನಗಳ ಧರ್ಮ ಸಂಸತ್ತಿನಲಲ್ಲಿ ಹಿಂದೂ ಸಾಧುಗಳು ಮತ್ತು ಇತರ ನಾಯಕರು ಹಿಂದೂರಾಷ್ಟ್ರ ಸ್ಥಾಪನೆಯ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಹಿಂದೂರಾಷ್ಟ್ರ ಸ್ಥಾಪನೆಯ ಆಶಯ ಈಡೇರಿಸಲು, ಹಿಂದೂಧರ್ಮವನ್ನು ಸಂರಕ್ಷಿಸಲು ಭಾರತೀಯ ಮುಸ್ಲಿಮರನ್ನು ಹತ್ಯೆ ಮಾಡಿದರೂ ಪರವಾಗಿಲ್ಲ ಎಂಬ ಕೆಲ ಸಾಧುಗಳ ಹೇಳಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯಲ್ಲಿ ನೆರೆದಿದ್ದ ಜನರು ದೊಡ್ಡಗುಂಪು ಭಾರತವನ್ನು ಹಿಂದೂರಾಷ್ಟ್ರ ಮಾಡುವ ಪ್ರತಿಜ್ಞೆಯನ್ನು ಮಾಡಿದೆ. ಅಗತ್ಯಬಿದ್ದರೆ ಸಂಘರ್ಷ ಮತ್ತು ಕೊಲೆಗಳನ್ನು ಮಾಡಿದರೂ ತಪ್ಪಿಲ್ಲ ಎಂದು ಈ ಸಭೆಗಳಲ್ಲಿ ಹೇಳಲಾಗಿದೆ. ದೇಶದ ಇತರ ಪ್ರದೇಶಗಳಲ್ಲಿಯೂ ಇಂಥ ಹಲವು ಸಭೆಗಳನ್ನು ಆಯೋಜಿಸಲಾಗಿದೆ. ದ್ವೇಷದ ಸಾರ್ವಜನಿಕ ಅಭಿವ್ಯಕ್ತಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಇದರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆಯೊದಗುವ ಜೊತೆಗೆ ದೇಶದ ಬಾಂಧವ್ಯದ ಹಂದವರೇ ಕುಸಿದುಬೀಳಬಹುದು. ಸೇನೆ ಮತ್ತು ಪೊಲೀಸರಿಗೆ ಶಸ್ತ್ರಕೈಗೆತ್ತಿಕೊಳ್ಳಲು ಕರೆ ನೀಡಿರುವ ಭಾಷಣಕಾರರೊಬ್ಬರು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದ್ದಾರೆ. ತನ್ನ ಸ್ವಂತ ದೇಶಬಾಂಧವರ ವಿರುದ್ಧ ಜನಾಂಗೀಯ ಹತ್ಯೆ ನಡೆಸಲು ಸೇನೆಗೆ ನೀಡಿರುವ ಈ ಕರೆಯನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇದು ಖಂಡನಾರ್ಹ ಎಂದು ಹೇಳಿದ್ದಾರೆ.

ಹಿಂಸಾಚಾರಕ್ಕೆ ನೀಡಿರುವ ಕರೆಯನ್ನು ಖಂಡಿಸಿರುವ ಸುಪ್ರೀಂಕೋರ್ಟ್​ನ 76 ವಕೀಲರು, ಈ ಬಗ್ಗೆ ಸುಪ್ರೀಂಕೋರ್ಟ್​ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒತ್ತಾಯಿಸಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವವರ ಹೆಸರುಗಳನ್ನು ಉಲ್ಲೇಖಿಸಿರುವ ವಕೀಲರು ಪೊಲೀಸರು ಕ್ರಮತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ನ್ಯಾಯಾಂಗವು ತಕ್ಷಣ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಿದೆ. ಭವಿಷ್ಯದಲ್ಲಿ ಒದಗುವ ಆತಂಕ ತಪ್ಪಿಸಲು ನ್ಯಾಯಾಂಗದ ಮಧ್ಯಪ್ರವೇಶ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ಹರಿದ್ವಾರದಲ್ಲಿ ಯತಿ ನರಸಿಂಹಾನಂದ ಆಯೋಜಿಸಿದ್ದ ಧರ್ಮ ಸಂಸತ್​ ಇದೀಗ ದೇಶವ್ಯಾಪಿ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ಹರಿದ್ವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ; ಮಧ್ಯ ಪ್ರವೇಶಿಸುವಂತೆ ಸಿಜೆಐ ರಮಣಗೆ ಪತ್ರ ಬರೆದ 76 ವಕೀಲರು ಇದನ್ನೂ ಓದಿ: ಕೋಮು ಹಿಂಸಾಚಾರವು ಜ್ವಾಲಾಮುಖಿಯಿಂದ ಲಾವಾ ಹೊರಹೊಮ್ಮಿದಂತೆ: ಸುಪ್ರೀಂಕೋರ್ಟ್​​ನಲ್ಲಿ ಕಪಿಲ್ ಸಿಬಲ್

Follow us on

Related Stories

Most Read Stories

Click on your DTH Provider to Add TV9 Kannada