ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿನ್ನೆ ತಡರಾತ್ರಿಯ ವೇಳೆಗೆ ಪೂರ್ಣಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ. ಕೊನೆಯ ಕ್ಷಣದವರೆಗೂ ಕುತೂಹಲ ಉಳಿಸಿದ್ದ ರಾಜಕೀಯ ಪಕ್ಷಗಳ ಹಾವು ಏಣಿ ಆಟಕ್ಕೆ ಕೊನೆಗೂ ತೆರೆಬಿದ್ದಿದೆ.
ಬಿಹಾರದ ಅತ್ಯಂತ ದೊಡ್ಡ ಪಕ್ಷವಾಗಿ ತೇಜಸ್ವಿ ಯಾದವ್ ಮುಂದಾಳತ್ವದ ಆರ್.ಜೆ.ಡಿ. ಹೊರಹೊಮ್ಮಿದ್ದು, ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಿದೆ. ಕಳೆದ ಬಾರಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜೆಡಿಯು ಮತ್ತು ಕಾಂಗ್ರೆಸ್ ಹಿನ್ನಡೆ ಸಾಧಿಸಿವೆ.
NDA ಮಿತ್ರಕೂಟದ ಸ್ಥಿತಿ-ಗತಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನಾಯಕತ್ವದ ಜೆಡಿಯು ಪಕ್ಷ, 71 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದರೆ, ಈ ಬಾರಿ ಕೇವಲ 43 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ಕೊವಿಡ್ ನಿಯಂತ್ರಿಸುವಲ್ಲಿ ವೈಫಲ್ಯ,, ವಲಸಿಗರ ಸಂಕಷ್ಟ, ಉದ್ಯೋಗ ಸಮಸ್ಯೆ ಮುಂತಾದ ಕಾರಣಗಳಿಂದ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿತ್ತು.
ಹೀಗಾಗಿ ಆಡಳಿತ ಪಕ್ಷಕ್ಕೆ ಮತದಾರ ಸರಿಯಾದ ಏಟು ಕೊಟ್ಟಿದ್ದಾನೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕಳೆದಬಾರಿಗಿಂತ ಉತ್ತಮ ಪ್ರದರ್ಶನ ತೋರಿದೆ. 2015ರ ಚುನಾವಣೆಯಲ್ಲಿ 53 ಸ್ಥಾನಗಳನ್ನು ಗೆದ್ದಿದ್ದ ಬೆಜೆಪಿ, ಈ ಚುನಾವಣೆಯಲ್ಲಿ 74 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಬಿಹಾರದ ಹಿಡಿತವನ್ನು ಬಿಗುಗೊಳಿಸಿದೆ.
ಮಹಾಘಟಬಂಧನ್ ಗೆ RJD ಆಸರೆ
ಲಾಲೂಪ್ರಸಾದ್ ಯಾದವ್ ಪುತ್ರ, ತೇಜಸ್ವಿ ಯಾದವ್ ನೇತೃತ್ವದ ಆರ್.ಜೆ.ಡಿ., 75 ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯದ ಅತಿದೊಡ್ಡ ಪಕ್ಷವಾಗಿ ಕಾಣಿಸಿಕೊಂಡಿದೆ. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಆರ್.ಜೆ.ಡಿ. ಐದು ಸ್ಥಾನಗಳ ಹಿನ್ನಡೆ ಸಾಧಿಸಿದೆ. 2015ರಲ್ಲಿ ಪಕ್ಷವು ಒಟ್ಟು 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
Published On - 1:01 pm, Wed, 11 November 20