ದೆಹಲಿ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸಲು ಮುಂದಾಗಿದೆ.
ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಜಮ್ಮು-ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 11,517 ಕಿ.ಮಿ ಒಳಗೊಂಡ 1,858 ರಸ್ತೆಗಳನ್ನು ಪೂರ್ಣಗೊಳಿಸಿದೆ. ಇದಲ್ಲದೆ, 84 ಸೇತುವೆಗಳನ್ನು ಸಹ ನಿರ್ಮಿಸಿದೆ. ಜೊತೆಗೆ, ಪಕ್ಕದ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ 699 ಕಿ.ಮಿ ಒಳಗೊಂಡ 96 ರಸ್ತೆಗಳನ್ನು ಹಾಗೂ 2 ಸೇತುವೆಗಳ ನಿರ್ಮಾಣವನ್ನ ಪೂರ್ಣಗೊಳಿಸಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಕೈಗೊಂಡಿರುವ ಇಲಾಖೆಯು ಕಾಮಗಾರಿಯಲ್ಲಿ ಕೆಲವು ನೂತನ ತಂತ್ರಜ್ಞಾನವನ್ನೂ ಬಳಸಿದೆ. ಉದಾಹರಣೆಗೆ, ಲೇಹ್ ಪ್ರದೇಶದ ಸ್ಟೋಕ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನ ಬಳಸಲಾಗಿದೆ. ಡಾಂಬರೀಕರಣದ ವೇಳೆ ಪ್ಲಾಸ್ಟಿಕ್ ಮಿಶ್ರಿತ ಡಾಂಬರು ಬಳಸುವುದರಿಂದ ರಸ್ತಗಳು ದೀರ್ಘ ಬಾಳಿಕೆ ಬರಲು ಸಹಕಾರಿಯಾಗಲಿದೆ.
ಒಟ್ನಲ್ಲಿ, ಕಾಶ್ಮೀರ ಕಣಿವೆ ಮತ್ತು ಲಡಾಖ್ನಲ್ಲಿ ರಸ್ತೆ ಸಂಪರ್ಕಕ್ಕೆ ವೇಗ ಸಿಕ್ಕಿರುವುದು ಸ್ಥಳೀಯರ ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ಏಳಿಗೆಗೆ ನೆರವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನೆ ಸಹ ದೊರಕಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.