2008ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ಶಾಸಕ ಸ್ಥಾನದಿಂದ ಅನರ್ಹ

|

Updated on: Feb 15, 2023 | 6:44 PM

15 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಅಬ್ದುಲ್ಲಾ ಅಜಂ ಖಾನ್ ಅವರನ್ನು ಮೊರಾದಾಬಾದ್ ನ್ಯಾಯಾಲಯವು ಎರಡು ವರ್ಷಗಳ (ಜೈಲು) ಶಿಕ್ಷೆ ವಿಧಿಸಿದ ನಂತರ ಅನರ್ಹಗೊಳಿಸಲಾಗಿದೆ. ಅವರ ಸ್ಥಾನವನ್ನು ಫೆಬ್ರವರಿ 13 ರಿಂದ ಖಾಲಿ ಎಂದು ಘೋಷಿಸಲಾಗಿದೆ.

2008ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ಶಾಸಕ ಸ್ಥಾನದಿಂದ ಅನರ್ಹ
ಅಬ್ದುಲ್ಲಾ ಅಜಂ ಖಾನ್
Follow us on

ಲಖನೌ: 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಹಿರಿಯ ನಾಯಕ ಅಜಂ ಖಾನ್ (Azam Khan) ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್(Abdullah Azam Khan) ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ.ಉತ್ತರ ಪ್ರದೇಶದ(Uttar Pradesh) ಸುವಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಖಾನ್‌ ಅವರನ್ನು  ಅನರ್ಹಗೊಳಿಸಿದ್ದು ಇದು ಎರಡನೇ ಬಾರಿ. ಖಾನ್ ಅವರ ಅನರ್ಹತೆ ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ ಹಿನ್ನಡೆಯಾಗಿದೆ. ಸೋಮವಾರ, ಮೊರಾದಾಬಾದ್‌ನ ನ್ಯಾಯಾಲಯವು 2008 ರ ಪ್ರಕರಣದಲ್ಲಿ ಅಬ್ದುಲ್ಲಾ ಅಜಂ ಖಾನ್ ಮತ್ತು ಅವರ ತಂದೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಜನವರಿ 29, 2008 ರಂದು ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ಸಾರ್ವಜನಿಕ ಸೇವಕನ ಕೆಲಸಕ್ಕೆ ಅಡ್ಡಿಪಡಿಸಿದ್ದು ಸೇರಿದಂತೆ ಇನ್ನಿತರ ಆರೋಪದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿತ್ತು.

ಡಿಸೆಂಬರ್ 31, 2007 ರಂದು ರಾಂಪುರದಲ್ಲಿ ಕೇಂದ್ರೀಯ ಮೀಸಲು ಪೋಲೀಸರ ಪಡೆ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಬೆಂಗಾವಲು ಪಡೆಯನ್ನು ಪೊಲೀಸರು ತಡೆದಿದ್ದರು. ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿತ್ತು. ಕಾನೂನಿನ ಅಡಿಯಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದ ಶಾಸಕರನ್ನು “ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ” ಅನರ್ಹಗೊಳಿಸಬಹುದು. ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ನಂತರ ಇನ್ನೂ ಆರು ವರ್ಷಗಳವರೆಗೆ ಅವರು ಅನರ್ಹರಾಗಿರುತ್ತಾರೆ.

ಇದನ್ನೂ ಓದಿವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ: ಅನುರಾಗ್ ಠಾಕೂರ್

“15 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಅಬ್ದುಲ್ಲಾ ಅಜಂ ಖಾನ್ ಅವರನ್ನು ಮೊರಾದಾಬಾದ್ ನ್ಯಾಯಾಲಯವು ಎರಡು ವರ್ಷಗಳ (ಜೈಲು) ಶಿಕ್ಷೆ ವಿಧಿಸಿದ ನಂತರ ಅನರ್ಹಗೊಳಿಸಲಾಗಿದೆ. ಅವರ ಸ್ಥಾನವನ್ನು ಫೆಬ್ರವರಿ 13 ರಿಂದ ಖಾಲಿ ಎಂದು ಘೋಷಿಸಲಾಗಿದೆ” ಎಂದು ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಬ್ದುಲ್ಲಾ ಅಜಂ ಖಾನ್ ಅವರನ್ನು ಅನರ್ಹಗೊಳಿಸಿರುವುದು ಇದೇ ಮೊದಲಲ್ಲ. 2020ರಲ್ಲಿ, ಅಲಹಾಬಾದ್ ಹೈಕೋರ್ಟ್ ಅವರ ಚುನಾವಣೆಯನ್ನು ರದ್ದುಗೊಳಿಸಿದ್ದು ಡಿಸೆಂಬರ್ 16, 2019 ರಿಂದ ಅವರನ್ನು ಅಸೆಂಬ್ಲಿಯಿಂದ ಅನರ್ಹಗೊಳಿಸಲಾಯಿತು. ಅವರು ನಾಮಪತ್ರ ಸಲ್ಲಿಸಿದಾಗ ಅವರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. 2017 ರಲ್ಲಿ ಸುವಾರ್ ನಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದರು.ಇದಾದ ನಂತರ ಅವರು 2022 ರ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೊಮ್ಮೆ ಸುವಾರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅಸೆಂಬ್ಲಿಯಲ್ಲಿ ರಾಂಪುರ ಸದರ್ ಪ್ರತಿನಿಧಿಸಿದ್ದ ಅಜಂ ಖಾನ್, ದ್ವೇಷ ಭಾಷಣ ಪ್ರಕರಣದಲ್ಲಿ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅನರ್ಹಗೊಂಡಿದ್ದರು..ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಆಕಾಶ್ ಸಕ್ಸೇನಾ ಅವರು ಖಾನ್ ಅವರ ಆಪ್ತ ಅಸೀಮ್ ರಜಾ ಅವರನ್ನು ಸೋಲಿಸಿದರು. ಅಜಂ ಖಾನ್ 1980 ರಿಂದ ಒಂಬತ್ತು ಬಾರಿ ರಾಂಪುರ ಸದರ್ ಕ್ಷೇತ್ರದಲ್ಲಿ ಗೆದ್ದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Wed, 15 February 23