ಉತ್ತರ ಪ್ರದೇಶ: ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಅಮ್ಮ, ಮಗಳು ಬೆಂಕಿಗಾಹುತಿ; ಕೊಲೆ ಪ್ರಕರಣ ದಾಖಲು
ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್, ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳು "ಗ್ರಾಮ ಸಮಾಜ" ಅಥವಾ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವು ಮಾಡಲು ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಪುರ: ಉತ್ತರ ಪ್ರದೇಶದ (Uttar Pradesh) ಕಾನ್ಪುರ (Kanpur) ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ನಡೆದ ಅತಿಕ್ರಮಣ ವಿರೋಧಿ ಅಭಿಯಾನದ (Demolition Drive )ವೇಳೆ 45 ವರ್ಷದ ಮಹಿಳೆ ಮತ್ತು ಆಕೆಯ ಮಗಳು (20) ಬೆಂಕಿಗೆ ಆಹುತಿಯಾಗಿದ್ದಾರೆ.ಮಹಿಳೆಯರು ಒಳಗಿರುವಾಗಲೇ ಅವರ ಗುಡಿಸಲಿಗೆ ಪೊಲೀಸರು ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ ಅಮ್ಮ ಮಗಳು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದು ರಾಜ್ಯ ಪೊಲೀಸರು ಈಗ 13 ಜನರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸ್ಟೇಷನ್ ಹೌಸ್ ಆಫೀಸರ್ ಮತ್ತು ಬುಲ್ಡೋಜರ್ ಆಪರೇಟರ್ ಸೇರಿದ್ದಾರೆ. ಅವರ ಮೇಲೆ ಕೊಲೆ ಯತ್ನ ಮತ್ತು ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಆರೋಪವನ್ನೂ ಹೊರಿಸಲಾಗಿದೆ.
ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್, ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳು “ಗ್ರಾಮ ಸಮಾಜ” ಅಥವಾ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವು ಮಾಡಲು ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಗಳು ಬೆಳಿಗ್ಗೆ ಬುಲ್ಡೋಜರ್‌ನೊಂದಿಗೆ ಬಂದಿದ್ದು ಅಲ್ಲಿನ ನಿವಾಸಿಗಳಿಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಜನರು ಒಳಗೆ ಇರುವಾಗಲೇ ಅವರು ಬೆಂಕಿ ಹಚ್ಚಿದರು. ನಾವು ತಪ್ಪಿಸಿಕೊಂಡೆವು. ಅವರು ನಮ್ಮ ದೇವಸ್ಥಾನವನ್ನು ಒಡೆದರು. ಯಾರೂ ಏನನ್ನೂ ಮಾಡಲಿಲ್ಲ, ಡಿಎಂ (ಜಿಲ್ಲಾ ಮ್ಯಾಜಿಸ್ಟ್ರೇಟ್) ಸಹ ಏನೂ ಮಾಡಿಲ್ಲ. ಎಲ್ಲರೂ ಓಡಿಹೋದರು, ಯಾರಿಗೂ ನನ್ನ ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಶಿವಂ ದೀಕ್ಷಿತ್ ಎಂಬವರು ಹೇಳಿದ್ದಾರೆ.
ಪ್ರಮೀಳಾ ದೀಕ್ಷಿತ್ ಮತ್ತು ಅವರ ಮಗಳು ನೇಹಾ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಸೋಮವಾರ ಹೇಳಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಗೌತಮ್ ಮತ್ತು ಪ್ರಮೀಳಾ ಅವರ ಪತಿ ಗೆಂದನ್ ಲಾಲ್ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದಾಗ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಮಗೆ ಸಿಕ್ಕ ಮಾಹಿತಿ ಏನೆಂದರೆ ಮಹಿಳೆ ಮತ್ತು ಅವರ ಮಗಳು ಗುಡಿಸಲಿನೊಳಗೆ ಬೀಗ ಹಾಕಿಕೊಂಡು ಬೆಂಕಿ ಹಚ್ಚಿದ್ದಾರೆ, ಇದು ಅವರ ಸಾವಿಗೆ ಕಾರಣವಾಗಿದೆ. ನಾವು ಸ್ಥಳಕ್ಕೆ ತಲುಪಿದ್ದೇವೆ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಹ ಇಲ್ಲಿದ್ದಾರೆ. ನಾವು ತನಿಖೆ ನಡೆಸುತ್ತೇವೆ, ಯಾವುದೇ ರೀತಿಯ ತಪ್ಪಾಗಿದ್ದರೆ, ನಾವು ತಪ್ಪಿತಸ್ಥರನ್ನು ಬಿಡುವುದಿಲ್ಲ, ”ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿಬಿಜಿಟಿಎಸ್ ಮೂರ್ತಿ ಹೇಳಿದ್ದಾರೆ.
“ಅತಿಕ್ರಮಣ ವಿರೋಧಿ ಡ್ರೈವ್ ಇದ್ದಾಗ, ವಿಡಿಯೊ ಚಿತ್ರೀಕರಿಸಲಾಗುತ್ತದೆ. ನಾವು ವಿಡಿಯೊವನ್ನು ಕೇಳಿದ್ದೇವೆ ಮತ್ತು ಅದನ್ನು ತನಿಖೆ ಮಾಡುತ್ತೇವೆ” ಎಂದಿದ್ದಾರೆ ಮೂರ್ತಿ.
ಸಾವಿನ ನಂತರ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಗ್ರಾಮಸ್ಥರು ಪೊಲೀಸರ ಮೇಲೆ ಇಟ್ಟಿಗೆ ಎಸೆದಿದ್ದು, ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಆಪಾದಿತ ಕೊಲೆಗೆ ಸಂಬಂಧಿಸಿದಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಮೈತಾ) ಜ್ಞಾನೇಶ್ವರ್ ಪ್ರಸಾದ್, ಲೇಖ್ಪಾಲ್ ಸಿಂಗ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನ್ಪುರ ವಲಯ) ಅಲೋಕ್ ಸಿಂಗ್, ವಿಭಾಗೀಯ ಆಯುಕ್ತ ರಾಜ್ ಶೇಖರ್ ಅವರೊಂದಿಗೆ ಗುಂಪನ್ನು ಸಮಾಧಾನಪಡಿಸಲು ಗ್ರಾಮಕ್ಕೆ ಭೇಟಿ ನೀಡಿದರು. ಯಾರೇ ಕಾರಣರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.ಇದು ಅತ್ಯಂತ ದುರದೃಷ್ಟಕರ ಘಟನೆ, ನಾವು ಕುಟುಂಬದೊಂದಿಗೆ ಇದ್ದೇವೆ, ನಾವು ಹೊಣೆಗಾರರನ್ನು ಬಿಡುವುದಿಲ್ಲ. ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಎಂದು ಶೇಖರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ