Supreme Court: ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಲಿಂಗಿ ಜೋಡಿ; ಏನಿದು ಪ್ರಕರಣ?

Same-sex couple: ಮದುವೆಯಾಗಲು ಬಯಸಿದ ಮಹಿಳಾ ಸಲಿಂಗಿ ಜೋಡಿಗೆ ಮನಶಾಸ್ತ್ರಜ್ಞರ ಬಳಿ ಕೌನ್ಸಲಿಂಗ್ ಮಾಡಿಸಿಕೊಳ್ಳುವಂತೆ ಕೇರಳ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಈಗ ಈ ಜೋಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

Supreme Court: ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಲಿಂಗಿ ಜೋಡಿ; ಏನಿದು ಪ್ರಕರಣ?
ಸುಪ್ರೀಂಕೋರ್ಟ್

Updated on: Feb 06, 2023 | 4:03 PM

ನವದೆಹಲಿ: ಸೈಕಿಯಾಟ್ರಿಸ್ಟ್ ಬಳಿ ಕೌನ್ಸೆಲಿಂಗ್ ಪಡೆಯುವಂತೆ ತನಗೆ ತಿಳಿಸಿದ ಕೇರಳ ಹೈಕೋರ್ಟ್​ನ (Kerala High Court) ತೀರ್ಪನ್ನು ಪ್ರಶ್ನಿಸಿ ಸಲಿಂಗಿ ಜೋಡಿಯೊಂದು (Same Sex Couple) ಸುಪ್ರೀಂ ಕೋರ್ಟ್​ನ ಮೆಟ್ಟಿಲೇರಿದ್ದಾರೆ. ಇವರ ಅರ್ಜಿ ವಿಚಾರಣೆಗೆ ಸರ್ವೊಚ್ಚ ನ್ಯಾಯಾಲಯ (Supreme Court) ಒಪ್ಪಿಕೊಂಡಿದೆ. ಇಂದು ದಿನಾಂತ್ಯದಲ್ಲಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಅರ್ಜಿದಾರರ ಪರ ವಕೀಲ ಪಿ ಶ್ರೀರಾಮ್ ಅವರು ವಾದಿಸುತ್ತಿದ್ದಾರೆ. ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಅವರು ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಇದಕ್ಕೆ ಒಪ್ಪಿದರೆನ್ನಲಾಗಿದೆ. ಅರ್ಜಿದಾರರು ಮಹಿಳಾ ಸಲಿಂಗಿಗಳಾಗಿದ್ದು, ಅವರಲ್ಲೊಬ್ಬರಿಗೆ ಕೇರಳ ಹೈಕೋರ್ಟ್ ಜನವರಿ 13ರಂದು, ಮನಃಶಾಸ್ತ್ರಜ್ಞರ ಬಳಿ ಕೌನ್ಸಿಲೆಂಗ್ ಪಡೆಯಬೇಕೆಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿದೆ.

ಇದನ್ನೂ ಓದಿ: 23 ವಯಸಿನ ಯುವತಿಯ ವರಿಸಿದ 6 ಹೆಣ್ಣು ಮಕ್ಕಳ ತಂದೆ 65 ವರ್ಷದ ವೃದ್ಧ! ಮದುವೆಗೆ ಸಾಕ್ಷಿಯಾದ ರಾಮ ಜನ್ಮಭೂಮಿ

ಅರ್ಜಿದಾರರು ಇಬ್ಬರೂ ಮಹಿಳೆಯರಾಗಿದ್ದು ವಿವಾಹವಾಗಲು ಬಯಸಿದ್ದಾರೆ. ಆದರೆ, ಅವರಲ್ಲೊಬ್ಬರನ್ನು ಆಕೆಯ ಪಾಲಕರು ಅಕ್ರಮವಾಗಿ ಮತ್ತು ಬಲವಂತವಾಗಿ ಕೂಡಿಹಾಕಿದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಆದರೆ, ಕೇರಳ ಹೈಕೋರ್ಟ್​ನ ತೀರ್ಪಿನಿಂದ ತನಗೆ ನ್ಯಾಯ ಸಿಕ್ಕಿಲ್ಲ ಎಂದು ಅರ್ಜಿದಾರೆ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಅಕ್ರಮ ಬಂಧನದಲ್ಲಿರುವ ತನ್ನ ಸಹವರ್ತಿಯು ದೈಹಿಕವಾಗಿ ಕೋರ್ಟ್ ವಿಚಾರಣೆಯಲ್ಲಿ ಹಾಜರಿರುವಂತೆ ಸೂಚಿಸಬೇಕೆಂದೂ ಅರ್ಜಿದಾರೆಯು ಈ ಸಂದರ್ಭದಲ್ಲಿ ಕೋರಿಕೊಂಡಿದ್ದಾಳೆ. ಕೇರಳ ಹೈಕೋರ್ಟ್​ನಿಂದ ನಡೆದ ವಿಚಾರಣೆ ವೇಳೆ ತನ್ನ ಸಹವರ್ತಿಯು ವಿಡಿಯೋ ಕಾನ್ಫೆರೆನ್ಸ್ ಮೂಲಕ ಕಲಾಪದಲ್ಲಿ ಪಾಲ್ಗೊಂಡಿದ್ದರು. ತಾನು ಅರ್ಜಿದಾರೆಯನ್ನು ಪ್ರೀತಿಸುತ್ತಿದ್ದು ಆಕೆಯ ಜೊತೆ ಸುಖವಾಗಿ ಬಾಳುವುದಾಗಿ ಆ ಮಹಿಳೆ ವಿಡಿಯೋ ಕಾನ್ಫೆರೆನ್ಸ್ ವೇಳೆ ಹೇಳಿದ್ದಳಂತೆ. ಇದನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ಅರ್ಜಿದಾರೆಯು, ಕೇರಳ ಹೈಕೋರ್ಟ್ ತಪ್ಪಾಗಿ ಪ್ರಕರಣ ಗ್ರಹಿಸಿ ತೀರ್ಪು ನೀಡಿದೆ ಎಂದು ವಿವರಿಸಿದ್ದಾಳೆ.