
ನವದೆಹಲಿ, ಅಕ್ಟೋಬರ್ 8: ಯೆಮೆನ್ನ ಇರಾನ್ ಬೆಂಬಲಿತ ಹೌತಿ ದಂಗೆಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮತ್ತು ಇತರೆ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ, ಅಕಾಸಾ ರಿಯಾದ್ಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ಅಕ್ಟೋಬರ್ 10ರವರೆಗೆ ರದ್ದುಗೊಳಿಸಿವೆ. ಇದೇ ವೇಳೆ, ದೆಹಲಿಯಿಂದ ರಿಯಾದ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಬಾಂಬ್ ಸ್ಪೋಟ ಮತ್ತು ದಾಳಿಯ ವರದಿಗಳ ಹಿನ್ನೆಲೆಯಲ್ಲಿ ಅರ್ಧ ಹಾದಿಯಿಂದಲೇ ವಾಪಾಸ್ ದೆಹಲಿಗೆ ಮರಳಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ರಿಯಾದ್ನಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಪರಿಗಣಿಸಿ ಅಕ್ಟೋಬರ್ 10ರವರೆಗೆ ರಿಯಾದ್ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣದ ದಿನಾಂಕ ಬದಲಾಯಿಸಲು ಅಥವಾ ಸಂಪೂರ್ಣ ಹಣ ಮರುಪಾವತಿ ಪಡೆಯಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ‘ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು’; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ
ಅಕಾಸಾ ಏರ್ ಇಂದು (ಅಕ್ಟೋಬರ್ 8) ನಿಗದಿಯಾಗಿದ್ದ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣ ಮರುನಿಗದಿಪಡಿಸಿಕೊಳ್ಳಬಹುದು ಅಥವಾ ಹಣ ಮರುಪಾವತಿ ಪಡೆಯಬಹುದು. ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ಎಂದು ಸಂಸ್ಥೆ ತಿಳಿಸಿದೆ.
ರಿಯಾದ್ ವಿಮಾನ ನಿಲ್ದಾಣದ ತುರ್ತು ಸಲಹೆ:
ರಿಯಾದ್ ನಗರ ಮತ್ತು ವಿಮಾನ ನಿಲ್ದಾಣದ ಸುತ್ತಮುತ್ತ ಸರಣಿ ಸ್ಪೋಟಗಳು ಕೇಳಿಬಂದ ಬೆನ್ನಲ್ಲೇ ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ, ವಿಮಾನದ ಪ್ರಸ್ತುತ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವಂತೆ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಕ್ಸ್ನಲ್ಲಿ ಸೂಚನೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಗುರಿ ತಲುಪಿರುವುದಾಗಿ ಘೋಷಿಸಿಕೊಂಡ ಹೌತಿ ಉಗ್ರರು
ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಿಯಾದ್ ನಗರದಲ್ಲಿ ಭಾರಿ ಸ್ಪೋಟದ ಶಬ್ದಗಳು ಕೇಳಿಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೌದಿ ಮಿತ್ರಪಡೆಯ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲಿಕಿ, ರಿಯಾದ್ ಕಡೆಗೆ ಬಂದ 2 ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಖಮಿಸ್ ಮುಶೈತ್ ಕಡೆಗೆ ಬಂದ 1 ಕ್ಷಿಪಣಿಯನ್ನು ತಡೆದು ಧ್ವಂಸಗೊಳಿಸಿರುವುದಾಗಿ ಹೇಳಿದ್ದಾರೆ.
ಭಾರತದ ಖಂಡನೆ:
ಸೌದಿ ಅರೇಬಿಯಾದ ಅಭಾ ಹಾಗೂ ರಿಯಾದ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಲ್ಲಿ ನಾಗರಿಕರು ಮೃತಪಟ್ಟಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. “ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸಂಪೂರ್ಣವಾಗಿ ಅಸಂಗತ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪುನರುಚ್ಚರಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ