AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು’; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ

ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ಭೀಕರ ದಾಳಿಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ನಾಗರಿಕರನ್ನು ಮತ್ತು ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿ ಸ್ವೀಕಾರಾರ್ಹವಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟೀಕಿಸಿದೆ. ಈ ದಾಳಿಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಅಲ್ಲದೆ, ಸೌದಿ ಅರೇಬಿಯಾ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ದೃಢವಾಗಿ ನಿಲ್ಲುವುದಾಗಿ ಬೆಂಬಲ ವ್ಯಕ್ತಪಡಿಸಿದೆ.

'ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು'; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ
ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿImage Credit source: X
ಸುಷ್ಮಾ ಚಕ್ರೆ
|

Updated on: Oct 08, 2026 | 3:21 PM

Share

ನವದೆಹಲಿ, ಅಕ್ಟೋಬರ್ 8: ಸೌದಿ ಅರೇಬಿಯಾದ 2 ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟು, ಹತ್ತಾರು ಜನರು ಗಾಯಗೊಂಡಿರುವುದನ್ನು ಭಾರತ ಸರ್ಕಾರ ಬಲವಾಗಿ ಖಂಡಿಸಿದೆ. “ನಾಗರಿಕರನ್ನು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಇಂತಹ ದಾಳಿಗಳನ್ನು ಸಂಪೂರ್ಣವಾಗಿ ಒಪ್ಪಲಾಗದು” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಕಳೆದ ಕೆಲವು ದಿನಗಳಲ್ಲಿ ನಡೆದ ಈ ದಾಳಿಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸಿದೆ.

ಸೌದಿ ವಿಮಾನ ನಿಲ್ದಾಣಗಳ ಮೇಲಿನ ದಾಳಿಯ ವಿವರ:

ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ರಿಯಾಧ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಒಬ್ಬರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದಾರೆ. ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 28 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಸೌದಿ ರಾಜಧಾನಿಯ ಹೆಬ್ಬಾಗಿಲಿಗೆ ಬಡಿದ ಯುದ್ಧದ ಜ್ವಾಲೆ: ರಿಯಾದ್ ಏರ್‌ಪೋರ್ಟ್ ಬಳಿ ಹೌತಿಗಳ ಡ್ರೋನ್-ಕ್ಷಿಪಣಿ ಅಟ್ಯಾಕ್

ಇರಾನ್ ಬೆಂಬಲಿತ ಹೌತಿ ದಂಗೆಕೋರರ ಈ ಕೃತ್ಯಕ್ಕೆ ಸೂಕ್ತ ಶಿಕ್ಷೆ ವಿಧಿಸುವುದಾಗಿ ಬೆದರಿಕೆ ಹಾಕಿರುವ ಸೌದಿ ನೇತೃತ್ವದ ಮಿತ್ರಪಡೆಗಳು, ಯೆಮೆನ್‌ನ ಸಾದಾ, ಹುದೈದಾ, ಜೌಫ್ ಮತ್ತು ಮಾರಿಬ್ ಪ್ರದೇಶಗಳಲ್ಲಿ ಹೌತಿಗಳ 80ಕ್ಕೂ ಹೆಚ್ಚು ಸೇನಾ ನೆಲೆಗಳು ಹಾಗೂ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿ ಧ್ವಂಸಗೊಳಿಸಿವೆ.

ಏಡೆನ್ ವಿಮಾನ ನಿಲ್ದಾಣದ ಮೇಲೂ ಕ್ಷಿಪಣಿ ದಾಳಿ ಯತ್ನ:

ಪ್ರಾದೇಶಿಕವಾಗಿ ವಿಮಾನಯಾನ ಮೂಲಸೌಕರ್ಯಗಳ ಮೇಲೆ ದಾಳಿ ತೀವ್ರಗೊಂಡಿದ್ದು, ಹೌತಿ ಪಡೆಗಳು ಯೆಮೆನ್‌ನ ಏಡೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿವೆ. ಕೈರೋಗೆ ತೆರಳಬೇಕಿದ್ದ ವಿಮಾನ ಆಗಮಿಸುವ ಕೆಲ ಕ್ಷಣಗಳ ಮುನ್ನ ಕ್ಷಿಪಣಿಯೊಂದು ಬಿದ್ದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಸೌದಿ ಪ್ರಿನ್ಸ್ ಒತ್ತಾಯಕ್ಕೆ ಹೌತಿಗಳ ಮೇಲೆ ಬಾಂಬ್ ದಾಳಿಗೆ ರೆಡಿಯಾಗಿದ್ದ ಅಮೆರಿಕ, ಕೊನೆ ಕ್ಷಣದಲ್ಲಿ ಟ್ರಂಪ್ ದಿಢೀರ್ ಯು-ಟರ್ನ್

ಸೌದಿ ನೇತೃತ್ವದ ಮಿತ್ರಪಡೆಗಳು ಯೆಮೆನ್‌ನಲ್ಲಿರುವ ಹೌತಿ ಉಗ್ರರ 82 ಸೇನಾ ನೆಲೆಗಳನ್ನು ಧ್ವಂಸಗೊಳಿಸಿವೆ. ಸಾದಾ, ಅಲ್ ಹುದೈದಾ, ಅಲ್ ಜೌಫ್ ಮತ್ತು ಮಾರಿಬ್‌ನಲ್ಲಿರುವ ಕ್ಷಿಪಣಿ ಕೇಂದ್ರಗಳು, ಆಯುಧ ಗೋದಾಮುಗಳು ಹಾಗೂ ಕಂಟ್ರೋಲ್ ರೂಮ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಗೆ ಸೂಕ್ತ ಶಿಕ್ಷೆ ವಿಧಿಸುವುದಾಗಿ ಸೌದಿ ಮಿತ್ರಪಡೆಯ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲಿಕಿ ಎಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More