ತನ್ನನ್ನು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು 7 ಮದುವೆಯಾಗಿರುವ ವ್ಯಕ್ತಿಯನ್ನು ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಬಂಧಿಸಿದೆ. ಆರೋಪಿ ವಿರುದ್ಧ ಕಾಶ್ಮೀರ ಪೊಲೀಸರು ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಿದ್ದಾರೆ. ಆರೋಪಿಯನ್ನು ಸೈಯದ್ ಇಶಾನ್ ಬುಖಾರಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಇಶಾನ್ ಬುಖಾರಿ ಮತ್ತು ಡಾ ಇಶಾನ್ ಬುಖಾರಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ತನ್ನನ್ನು ನ್ಯೂರೋ-ಸ್ಪೆಷಲಿಸ್ಟ್ ವೈದ್ಯ ಎಂದು ಬಣ್ಣಿಸಿಕೊಂಡ ಬುಖಾರಿ ತನ್ನನ್ನು ಸೇನಾ ವೈದ್ಯ, ಪಿಎಂಒ ಅಧಿಕಾರಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿಯ ನಿಕಟವರ್ತಿಯಾಗಿಯೂ ಹೇಳಿಕೊಂಡಿದ್ದಾನೆ. ಒಡಿಶಾ ಪೊಲೀಸರ ಹೇಳಿಕೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ, ಈ ವ್ಯಕ್ತಿ ಕಾಶ್ಮೀರವಲ್ಲದೆ ದೇಶದ ಇತರೆ ರಾಜ್ಯಗಳಲ್ಲಿ 6-7 ಮದುವೆ ಮಾಡಿರುವುದು ಪತ್ತೆಯಾಗಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದ ಹೆಣ್ಣುಮಕ್ಕಳು ಈತ ಮದುವೆಯಾಗಿದ್ದ. ದಾಳಿಯ ಸಮಯದಲ್ಲಿ ಪೊಲೀಸರು 100 ಕ್ಕೂ ಹೆಚ್ಚು ಗಂಭೀರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬುಖಾರಿ ಹಲವು ಅನುಮಾನಾಸ್ಪದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ,ಕೇರಳ ಮತ್ತು ಪಾಕಿಸ್ತಾನದ ಅನುಮಾನಾಸ್ಪದ ವ್ಯಕ್ತಿಗಳು ಭಾಗಿಯಾಗಿರುವ ಆರೋಪವಿದೆ.
ಮತ್ತಷ್ಟು ಓದಿ: ತಿರುಪತಿಯಲ್ಲಿ ವಿಐಪಿ ದರ್ಶನಕ್ಕಾಗಿ ಸುಳ್ಳು ಹೇಳಿದ ನಕಲಿ ಐಆರ್ಎಸ್ ಅಧಿಕಾರಿ ಬಂಧನ
ಡಿಸೆಂಬರ್ 15 ರಂದು ಬಂದ ಮಾಹಿತಿಯ ಮೇರೆಗೆ ಎಸ್‌ಟಿಎಫ್ ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ.
ಕುಪ್ವಾರದ ಹಂದ್ವಾರ ನಿವಾಸಿ ಬುಖಾರಿ, ಜಾಜ್‌ಪುರದ ಧರ್ಮಶಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಅಮೆರಿಕದ ಕಾರ್ನೆಲ್ ಯೂನಿವರ್ಸಿಟಿ, ಕೆನಡಾದ ಹೆಲ್ತ್ ಸರ್ವೀಸಸ್ ಇನ್‌ಸ್ಟಿಟ್ಯೂಟ್, ತಮಿಳುನಾಡಿನ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹೆಸರಿನಲ್ಲಿ ಪಡೆದಿರುವ ನಕಲಿ ವೈದ್ಯಕೀಯ ಪದವಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವಾರು ಬಾಂಡ್‌ಗಳು, ಅಫಿಡವಿಟ್‌ಗಳು, ಎಟಿಎಂ ಕಾರ್ಡ್‌ಗಳು, ಗುರುತಿನ ಚೀಟಿಗಳು, ಖಾಲಿ ಚೆಕ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ