ದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎರಡು ವಿವಾದಾತ್ಮಕ ತೀರ್ಪುಗಳನ್ನು ಅನುಸರಿಸಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಪುಷ್ಪ ಅವರನ್ನು ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ನ ಕೊಲಿಜಿಯಂ ತಡೆ ನೀಡಿದೆ.
ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣದ ತೀರ್ಪು ನೀಡುವ ವೇಳೆ, ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ನ್ಯಾಯಮೂರ್ತಿ ಪುಷ್ಪ ತೀರ್ಪು ನೀಡಿದ್ದರು. ಈ ಹಿಂದೆ ಇದೇ ಪುಷ್ಪ ಅವರು ಚರ್ಮ ತಟ್ಟಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ತೀರ್ಪು ನೀಡಿದ್ದರು.
ಕೊಲಿಜಿಯಂ ತನ್ನ ಶಿಪಾರಸ್ಸನ್ನು ಹಿಂಪಡೆದಿದೆ..
ಜನವರಿ 20 ರಂದು ನಡೆದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಕೊಲಿಜಿಯಂ, ನ್ಯಾಯಮೂರ್ತಿ ಪುಷ್ಪ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾಪವನ್ನಿಟ್ಟಿತ್ತು. ಆದರೆ ಪುಷ್ಪ ಅವರ ಈ ವಿವಾದಾತ್ಮಕ ತೀರ್ಪಿನಿಂದ ಎಚ್ಚೆತ್ತುಕೊಂಡ ಕೊಲಿಜಿಯಂ ತನ್ನ ಶಿಪಾರಸ್ಸನ್ನು ಹಿಂಪಡೆದಿದೆ. ಈ ಹಿನ್ನೆಲೆಯಿಂದಾಗಿ ಪುಷ್ಪ ಅವರನ್ನು ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಬ್ರೇಕ್ ಬಿದ್ದಿದೆ.
ಪುಷ್ಪ ಅವರ ಈ ತೀರ್ಪನ್ನು ಗಮನಿಸಿದ ಕೊಲಿಜಿಯಂ ಪುಷ್ಪ ಅವರು ಇಂತಹ ಇನ್ನಷ್ಟು ಪ್ರಕರಣಗಳನ್ನು ಎದುರಿಸಬೇಕಾಗಿದೆ. ವಕೀಲರಾಗಿದ್ದಾಗ ಅವರು ಇಂತಹ ಪ್ರಕರಣಗಳನ್ನು ಬಹುಶಃ ನಿರ್ವಹಿಸಿಲ್ಲ ಎಂದು ಕಾಣುತ್ತದೆ. ಹೀಗಾಗಿ ಅವರಿಗೆ ಇನ್ನೂ ತರಬೇತಿಯ ಅವಶ್ಯಕತೆಯಿದೆ ಎಂಬುದು ಕೊಲಿಜಿಯಂನ ಅನಿಸಿಕೆಯಾಗಿದೆ.
ನ್ಯಾಯಮೂರ್ತಿ ಪುಷ್ಪಾ ಹಿನ್ನೆಲೆ..
ನ್ಯಾಯಮೂರ್ತಿ ಪುಷ್ಪಾ ವೀರೇಂದ್ರ ಗಣದೇವಾಲಾ ಅವರು ಮಾರ್ಚ್ 3, 1969 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಪರತ್ವಾಡದಲ್ಲಿ ಜನಿಸಿದರು. ಅವರು ವಿವಿಧ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳಿಗೆ ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಜೊತೆಗೆ ಅಮರಾವತಿಯ ವಿವಿಧ ಕಾಲೇಜುಗಳಲ್ಲಿ ಗೌರವ ಉಪನ್ಯಾಸಕರಾಗಿ ಹಾಗೂ ಅಮರಾವತಿ ವಿಶ್ವವಿದ್ಯಾಲಯದ ಎಂಬಿಎ ಮತ್ತು ಎಲ್ಎಲ್ಎಂ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ. 2007 ರಲ್ಲಿ ನೇರವಾಗಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಅವರು, ಫೆಬ್ರವರಿ 13, 2019 ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು.
Published On - 10:00 am, Sun, 31 January 21