ಒಂದೇ ದಿನ 11 ಮಹಿಳಾ ವಕೀಲರಿಗೆ ಹಿರಿಯ ನ್ಯಾಯವಾದಿ ಸ್ಥಾನಮಾನ ನೀಡಿ ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್

ಶೋಭಾ ಗುಪ್ತಾ, ಸ್ವರೂಪಮಾ ಚತುರ್ವೇದಿ, ಲಿಜ್ ಮ್ಯಾಥ್ಯೂ, ಕರುಣಾ ನುಂಡಿ, ಉತ್ತರಾ ಬಬ್ಬರ್, ಹರಿಪ್ರಿಯಾ ಪದ್ಮನಾಭನ್, ಅರ್ಚನಾ ಪಾಠಕ್ ದವೆ, ಶಿರಿನ್ ಖಜುರಿಯಾ, ಎನ್ಎಸ್ ನಪ್ಪಿನೈ, ಎಸ್ ಜನನಿ ಮತ್ತು ನಿಶಾ ಬಾಗ್ಚಿ ಅವರಿಗೆ ಹಿರಿಯ ವಕೀಲರ ಸ್ಥಾನಮಾನ ನೀಡಲಾಗಿದೆ.

ಒಂದೇ ದಿನ 11 ಮಹಿಳಾ ವಕೀಲರಿಗೆ ಹಿರಿಯ ನ್ಯಾಯವಾದಿ ಸ್ಥಾನಮಾನ ನೀಡಿ ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್

Updated on: Jan 19, 2024 | 8:38 PM

ದೆಹಲಿ ಜನವರಿ 19: ಒಂದೇ ದಿನದಲ್ಲಿ 11 ಮಹಿಳಾ ವಕೀಲರಿಗೆ ಹಿರಿಯ ವಕೀಲರ (Senior Advocate) ಸ್ಥಾನಮಾನ ನೀಡಿ ಸುಪ್ರೀಂಕೋರ್ಟ್ (Supreme Court) ಶುಕ್ರವಾರ ಇತಿಹಾಸ ಸೃಷ್ಟಿಸಿದೆ. ನ್ಯಾಯಾಲಯದ ಇತಿಹಾಸದಲ್ಲಿ ಇದುವರೆಗೆ 12 ಮಹಿಳಾ ವಕೀಲರಿಗೆ ಮಾತ್ರ ಹಿರಿಯ ವಕೀಲರ ಸ್ಥಾನಮಾನ ನೀಡಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಅವರ ನೇತೃತ್ವದಲ್ಲಿ, 11 ಮಹಿಳೆಯರು ಮತ್ತು 34 ಫಸ್ಟ್ ಜನರೇಷನ್ ವಕೀಲರು ಸೇರಿದಂತೆ 56 ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನವನ್ನು ನೀಡಲಾಯಿತು.

11 ವಕೀಲೆಯರು ಯಾರೆಲ್ಲಾ?

ಶೋಭಾ ಗುಪ್ತಾ, ಸ್ವರೂಪಮಾ ಚತುರ್ವೇದಿ, ಲಿಜ್ ಮ್ಯಾಥ್ಯೂ, ಕರುಣಾ ನುಂಡಿ, ಉತ್ತರಾ ಬಬ್ಬರ್, ಹರಿಪ್ರಿಯಾ ಪದ್ಮನಾಭನ್, ಅರ್ಚನಾ ಪಾಠಕ್ ದವೆ, ಶಿರಿನ್ ಖಜುರಿಯಾ, ಎನ್ಎಸ್ ನಪ್ಪಿನೈ, ಎಸ್ ಜನನಿ ಮತ್ತು ನಿಶಾ ಬಾಗ್ಚಿ.

ಫಸ್ಟ್ ಜನರೇಷನ್ ವಕೀಲರ ಪಟ್ಟಿಯಲ್ಲಿ ಅಮಿತ್ ಆನಂದ್ ತಿವಾರಿ, ಸೌರಭ್ ಮಿಶ್ರಾ ಮತ್ತು ಅಭಿನವ್ ಮುಖರ್ಜಿ ಸೇರಿದ್ದಾರೆ.ಇಂದು ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೆಚ್ಚಿನ ಸಂಖ್ಯೆಯ ಮಹಿಳಾ ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನ ನೀಡುವ ನಿರ್ಧಾರವನ್ನು ಸ್ವಾಗತಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ವಕೀಲೆ ಐಶ್ವರ್ಯ ಭಾಟಿ, ಇದು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಹೆಜ್ಜೆಯಾಗಿದೆ. “ಮಹಿಳಾ ವಕೀಲರ ಅರ್ಹತೆಯನ್ನು ಗುರುತಿಸುವ ಮೂಲಕ ನಿಜವಾಗಿಯೂ ಲಿಂಗ ಸಮಾನತೆ ಜತೆಗೆ ಇದು ಅವರಿಗೆ ಗೌರವವನ್ನು ತೋರಿಸುತ್ತದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಇದುವರೆಗೆ ಇಬ್ಬರು ನಿವೃತ್ತ ನ್ಯಾಯಾಧೀಶರು ಸೇರಿದಂತೆ 14 ಮಹಿಳೆಯರಿಗೆ ಮಾತ್ರ ಹಿರಿಯ ವಕೀಲ ಸ್ಥಾನಮಾನವನ್ನು ನೀಡಿತ್ತು.

2019 ರಲ್ಲಿ, ಸುಪ್ರೀಂ ಕೋರ್ಟ್ ಏಕಕಾಲದಲ್ಲಿ ಆರು ಮಹಿಳಾ ವಕೀಲರಾದ ಮಾಧವಿ ದಿವಾನ್, ಮೇನಕಾ ಗುರುಸ್ವಾಮಿ, ಅನಿತಾ ಶೆಣೈ, ಅಪರಾಜಿತಾ ಸಿಂಗ್, ಐಶ್ವರ್ಯ ಭಾಟಿ ಮತ್ತು ಪ್ರಿಯಾ ಹಿಂಗೋರಾಣಿ ಅವರಿಗೆ ಹಿರಿಯ ವಕೀಲರ ಸ್ಥಾನಮಾನವನ್ನು ನೀಡಿತ್ತು.

ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ಮಾಡಿದ ಮೊದಲ ವಕೀಲರು ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ. ನಂತರ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದರು. ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದ 57 ವರ್ಷಗಳ ನಂತರ 2007 ರಲ್ಲಿ ನ್ಯಾಯಮೂರ್ತಿ ಮಲ್ಹೋತ್ರಾ ನಾಮನಿರ್ದೇಶನಗೊಂಡರು.

ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳು ಜ.21ರೊಳಗೆ ಶರಣಾಗಲು ಸುಪ್ರೀಂಕೋರ್ಟ್ ಆದೇಶ

ಇದರ ನಂತರ, 2013 ರಲ್ಲಿ, ಮೀನಾಕ್ಷಿ ಅರೋರಾ, ಕಿರಣ್ ಸೂರಿ ಮತ್ತು ವಿಭಾ ದತ್ತಾ ಮಖಿಜಾ ಅವರನ್ನು ಹಿರಿಯ ವಕೀಲರನ್ನಾಗಿ ಮಾಡಲಾಯಿತು. 2015 ರಲ್ಲಿ,  ವಿ ಮೋಹನ ಮತ್ತು ಮಹಾಲಕ್ಷ್ಮಿ ಪಾವನಿ ಅವರನ್ನು ನಾಮನಿರ್ದೇಶನ ಮಾಡಲಾಯಿತು. ಅಲ್ಲಿಗೆ ಸಂಖ್ಯೆ 6 ಆಯ್ತು.

2006 ರಲ್ಲಿ ನ್ಯಾಯಮೂರ್ತಿ ಶಾರದಾ ಅಗರ್ವಾಲ್ ಮತ್ತು 2015 ರಲ್ಲಿ ನ್ಯಾಯಮೂರ್ತಿ ರೇಖಾ ಶರ್ಮಾ  ಹೀಗೆ ಇಬ್ಬರು ನಿವೃತ್ತ ಮಹಿಳಾ ಹೈಕೋರ್ಟ್ ನ್ಯಾಯಾಧೀಶರನ್ನು ನಂತರ ನಾಮನಿರ್ದೇಶನ ಮಾಡಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ