ಚೆನ್ನೈ, ಜು.18: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬಂಧನದಲ್ಲಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ (Senthil Balaji) ಮತ್ತು ಅವರ ಪತ್ನಿ ಮೇಗಾಲಾ ಅವರನ್ನು ಇ.ಡಿ ಕಸ್ಟಡಿಯಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ವಿಭಜಿತ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ನ ವಿರುದ್ಧ ಸುಪ್ರೀಂ ಕೋರ್ಟ್ಗೆ ಸಚಿವ ವಿ ಸೆಂಥಿಲ್ ಬಾಲಾಜಿ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ವಿಭಜಿತ ತೀರ್ಪು ನೀಡಿದರು. ನ್ಯಾಯಮೂರ್ತಿ ನಿಶಾ ಬಾನು ಅವರು ಬಾಲಾಜಿ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಮನವಿಯನ್ನು ಸಮರ್ಥನೀಯವಾಗಿದೆ, ಅವರನ್ನು ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ, ಆದರೆ ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ನ್ಯಾಯಮೂರ್ತಿ ಬಾನು ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ, ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಾಜಿ ಆಸ್ಪತ್ರೆಯಲ್ಲಿರುವಷ್ಟು ದಿನ ಇಡಿ ಕಸ್ಟಡಿಯಿಂದ ಹೊರಗಿರಲಿದ್ದಾರೆ. ಅಷ್ಟರೊಳಗೆ ಬಾಲಾಜಿ ಫಿಟ್ ಆಗಿದ್ದರೆ ಹತ್ತು ದಿನಗಳಲ್ಲಿ ಮತ್ತೆ ಇಡಿ ಕಸ್ಟಡಿಗೆ ತೆರಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸೆಂಥಿಲ್ ಬಾಲಾಜಿ ಬಿಡುಗಡೆ ಕೋರಿ ಅರ್ಜಿ, ಮದ್ರಾಸ್ ಹೈಕೋರ್ಟ್ನಿಂದ ವಿಭಜಿತ ತೀರ್ಪು
ಸೋಮವಾರ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸೆಂಥಿಲ್ ಬಾಲಾಜಿ ಅವರನ್ನು ಚೆನ್ನೈನ ಪುಝಲ್ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಯಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಇಡಿ ಬಾಲಾಜಿ ಅವರನ್ನು ಬಂಧಿಸಿತ್ತು. ಇತ್ತೀಚೆಗೆ ನ್ಯಾಯಾಲಯ ಅವರ ಬಂಧನವನ್ನು ಜುಲೈ 26 ರವರೆಗೆ ವಿಸ್ತರಿಸಿತ್ತು.
ಜೂನ್ 12ರಂದು ಜಾರಿ ನಿರ್ದೇಶನಾಲಯ ಸಚಿವ ವಿ ಸೆಂಥಿಲ್ ಬಾಲಾಜಿ ಮನೆ ಮತ್ತು ಅವರ ಆಪ್ತರ ಮೇಲೆ ದಾಳಿ ನಡೆಸಿತ್ತು, ನಂತರ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 19 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಅವರನ್ನು ಬಂಧಿಸಿದರು.
Published On - 1:50 pm, Tue, 18 July 23