APMC Act ಅಂದು ತಿದ್ದುಪಡಿ ಪರ ಇದ್ದ ಶರದ್ ಪವಾರ್ ಪತ್ರವನ್ನು ಓದಿದ ಶಿವರಾಜ್ ಸಿಂಗ್ ಚೌಹಾಣ್

| Updated By: ಸಾಧು ಶ್ರೀನಾಥ್​

Updated on: Dec 08, 2020 | 12:47 PM

ಪತ್ರದಲ್ಲಿ ಸೋನಿಯಾ ಗಾಂಧಿ ಅವರ ನಿಲುವುಗಳ ಬಗ್ಗೆ ಮಾಜಿ ಕೇಂದ್ರ ಕೃಷಿ ಸಚಿವ ಶರಾದ್ ಪವಾರ್ ವಿರೋಧ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಾಗಿದೆ. ಆದ್ದರಿಂದ ಸರ್ಕಾರದ ವಿರುದ್ಧ ಪಿತೂರಿ ಮಾಡಲು ರೈತರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಚೌಹಾಣ್ ಲೇವಡಿ ಮಾಡಿದ್ದಾರೆ.

APMC Act ಅಂದು ತಿದ್ದುಪಡಿ ಪರ ಇದ್ದ ಶರದ್ ಪವಾರ್ ಪತ್ರವನ್ನು ಓದಿದ ಶಿವರಾಜ್ ಸಿಂಗ್ ಚೌಹಾಣ್
ಪತ್ರ ತೋರಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಶರಾದ್ ಪವಾರ್
Follow us on

ಹೈದರಾಬಾದ್: ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಎನ್​ಸಿಪಿ ಪಕ್ಷದ ಶರದ್ ಪವಾರ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಿಡಿಕಾರಿದ್ದಾರೆ. ಪವಾರ್ ಯುಪಿಎ ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಬಗ್ಗೆ ಒಲವು ತೋರಿದ್ದರು. ಆದರೆ ಈಗ ರಾಜಕೀಯ ಲಾಭಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಸಾಕ್ಷ್ಯವನ್ನಾಗಿ ಪವಾರ್ ಬರೆದಿದ್ದ ಪತ್ರ ಎತ್ತಿಹಿಡಿದ ಚೌಹಾಣ್

ಶರದ್ ಪವಾರ್ ಪತ್ರ ತೋರಿಸಿದ ಚೌಹಾಣ್

ಎಪಿಎಂಸಿ ಕಾಯ್ದೆ ತಿದ್ದುಪಡಿಯ ಅವಶ್ಯಕತೆ ಕುರಿತು ಶರದ್ ಪವಾರ್ 2011ರಲ್ಲಿ ನನಗೆ ಪತ್ರ ಬರೆದಿದ್ದರು ಎಂದ ಚೌಹಾಣ್, ತಮ್ಮ ಬಳಿಯಿದ್ದ ಪತ್ರವನ್ನು ಬಹಿರಂಗವಾಗಿ ಓದಿದರು. ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಲು ಅನುವಾಗುವಂತೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಬೇಕು. ರೈತರು, ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಪತ್ರದಲ್ಲಿರುವುದನ್ನು ತಿಳಿಸಿದರು.

ಅಷ್ಟೇ ಅಲ್ಲದೇ, ಆ ಪತ್ರದಲ್ಲಿ ಸೋನಿಯಾ ಗಾಂಧಿ ಅವರ ನಿಲುವುಗಳ ಬಗ್ಗೆ ಮಾಜಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ವಿರೋಧ ವ್ಯಕ್ತಪಡಿಸಿದ್ದರು ಎಂದು ಚೌಹಾಣ್ ಹೇಳಿದ್ದಾರೆ. ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಾಗಿದೆ. ಆದ್ದರಿಂದ ಸರ್ಕಾರದ ವಿರುದ್ಧ ಪಿತೂರಿ ಮಾಡಲು ರೈತರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಕೃಷಿ ಕಾಯ್ದೆಯ ಕುರಿತು ಕೇಂದ್ರ ಸರ್ಕಾರ ರೈತರಿಗೆ ಸಮರ್ಪಕವಾಗಿ ವಿವರಣೆ ನೀಡಲಿದೆ. ರೈತರು ಪ್ರತಿಪಕ್ಷಗಳ ಪಿತೂರಿಗೆ ಸಿಲುಕಬಾರದು. ರೈತರನ್ನು ಮುಂದೆ ಬಿಟ್ಟು ತಮಾಷೆ ನೋಡುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಶಿವರಾಜ್​ ಸಿಂಗ್ ಚೌಹಾಣ್ ರೈತರಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿರುವ ಪವಾರ್
ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿರುವ ಪವಾರ್ ಕೇಂದ್ರ ಸರ್ಕಾರ ತನ್ನ ನಿಲುವನ್ನು ಹಿಂಪಡೆಯದಿದ್ದರೆ ದೇಶದ ಎಲ್ಲಾ ಭಾಗಗಳಿಂದ ರೈತರು ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ಎಚ್ಚರಿಸಿದ್ದರು. ಅಲ್ಲದೇ ಈ ಕುರಿತು ಮಾತನಾಡಲು ನಾಳೆ ಶರಾದ್ ಪವಾರ್ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಳೆಯ ಪತ್ರವನ್ನು ಓದುವ ಮೂಲಕ ಶರದ್ ಪವಾರ್ ಅವರ ನಿಲುವನ್ನು ಪ್ರಶ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ನೂತನ ಕೃಷಿ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಮುಂದಾದ ಕೇರಳ

Published On - 12:11 pm, Tue, 8 December 20