ನಿರ್ದಿಷ್ಟ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನಿರಾಕರಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಪ್ರಕರಣ ತೋರಿಸಿ: ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jul 18, 2022 | 8:43 PM

ಆಗ ನ್ಯಾಯಮೂರ್ತಿ ಭಟ್ ಅವರು, "ಭಾಷಾ ಅಲ್ಪಸಂಖ್ಯಾತರನ್ನು ನೋಡಿ. ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ವ್ಯಕ್ತಿ ಅಲ್ಪಸಂಖ್ಯಾತರಾಗಿದ್ದು, ಯಾವುದೇ ಅಧಿಸೂಚನೆ ಅಗತ್ಯವಿದೆಯೇ?" ಎಂದು ಕೇಳಿದ್ದಾರೆ

ನಿರ್ದಿಷ್ಟ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನಿರಾಕರಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಪ್ರಕರಣ ತೋರಿಸಿ: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us on

ರಾಜ್ಯಗಳಲ್ಲಿ ಹಿಂದೂಗಳ (Hindu) ಸಂಖ್ಯೆ ಕಡಿಮೆ ಇದ್ದು ಅಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್(Supreme Court) ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ (minority) ಸ್ಥಾನಮಾನವನ್ನು ನಿರಾಕರಿಸಲಾಗುತ್ತಿದೆ ಎಂದು ಸೂಚಿಸುವ ಸ್ಪಷ್ಟ ಮತ್ತು ವಾಸ್ತವಿಕವಾದ ಪ್ರಕರಣವನ್ನು ನ್ಯಾಯಾಲಯಕ್ಕೆ ತೋರಿಸಿ ಎಂದು ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಯುಯು ಲಲಿತ್, ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿದ್ದು “ಮಿಜೋರಾಂ ಅಥವಾ ಕಾಶ್ಮೀರದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲಾಗಿದೆ ಎಂಬ ನಿರ್ದಿಷ್ಟ ಪ್ರಕರಣವಿದ್ದರೆ, ನಾವು ಪರಿಗಣಿಸಬಹುದು. ಇದು ವಾಸ್ತವ ಪರಿಸ್ಥಿತಿ ಆಗುವವರೆಗೆ ಈ ರೀತಿ ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.  ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನ್ ಸಮುದಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಿರುವ ಮತ್ತು ಜಿಲ್ಲಾ ಮಟ್ಟದಲ್ಲಿ ಅಲ್ಪ ಸಂಖ್ಯಾತರನ್ನು ಗುರುತಿಸಬೇಕು ಎಂದು ನಿರ್ದೇಶಿಸಿ ಕೇಂದ್ರ ಸರ್ಕಾರ 1993ರಲ್ಲಿ ಹೊರಡಿಸಿ ಅಧಿಸೂಚನೆ ಪ್ರಶ್ನಿಸಿ ದೇವಕ್ ನಂದನ್ ಠಾಕೂರ್ ಪಿಐಎಲ್ ಸಲ್ಲಿಸಿದ್ದಾರೆ.

ಹಿರಿಯ ವಕೀಲ ಅರವಿಂದ ದಾತಾರ್ ಅರ್ಜಿದಾರರ ಪರವಾಗಿ ಹಾಜರಾಗಿದ್ದು, 1993ರ ಅಧಿಸೂಚನೆಯನ್ನು ಹಾಜರು ಪಡಿಸಿದ್ದಾರೆ. ಆ ಅಧಿಸೂಚನೆಯಲ್ಲಿ ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನರನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಗುರುತಿಸಲಾಗಿದೆ. ಆದಾಗ್ಯೂ, ಅಲ್ಪಸಂಖ್ಯಾತರು ನಿರ್ದಿಷ್ಟ ರಾಜ್ಯವನ್ನು ಸೂಚಿಸಬೇಕು ಎಂದು ತೀರ್ಪುಗಳು ಹೇಳುತ್ತವೆ ಎಂದು ಅವರು ಹೇಳಿದರು. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಹಕ್ಕುಗಳನ್ನು ಚಲಾಯಿಸಲು ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಅಧಿಸೂಚನೆ ಅಗತ್ಯವಿದೆಯೇ ಎಂದು ಪೀಠವು ದಾತಾರ್ ಅವರನ್ನು ಕೇಳಿದೆ.
ಇದಕ್ಕೆ ದಾತಾರ್ ಅಧಿಸೂಚನೆಯಿಲ್ಲದೆ ಆರ್ಟಿಕಲ್ 29 ಮತ್ತು 30 ರ ಅಡಿಯಲ್ಲಿ ಹಕ್ಕುಗಳನ್ನು ಚಲಾಯಿಸಲಾಗುವುದಿಲ್ಲ ಎಂದು ಉತ್ತರಿಸಿದರು.

ಆಗ ನ್ಯಾಯಮೂರ್ತಿ ಭಟ್ ಅವರು, “ಭಾಷಾ ಅಲ್ಪಸಂಖ್ಯಾತರನ್ನು ನೋಡಿ. ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ವ್ಯಕ್ತಿ ಅಲ್ಪಸಂಖ್ಯಾತರಾಗಿದ್ದು, ಯಾವುದೇ ಅಧಿಸೂಚನೆ ಅಗತ್ಯವಿದೆಯೇ?” ಎಂದು ಕೇಳಿದ್ದಾರೆ
ಪೂರ್ವನಿದರ್ಶನಗಳ ಪ್ರಕಾರ, ಅಲ್ಪಸಂಖ್ಯಾತರನ್ನು ರಾಜ್ಯವಾರು ವ್ಯಾಖ್ಯಾನಿಸಬೇಕು ಎಂದು ಕೋರ್ಟ್ ಗಮನಿಸಿದೆ. ಪಂಜಾಬ್‌ನಲ್ಲಿ ಸಿಖ್ ಸಂಸ್ಥೆಯೊಂದು ಹಕ್ಕು ಸಾಧಿಸುವುದು ನ್ಯಾಯದ ಅಪಹಾಸ್ಯವಾಗಿದೆ. ಮಿಜೋರಾಂನಲ್ಲಿ ಕ್ರಿಶ್ಚಿಯನ್ ಸಂಸ್ಥೆಯು ಸ್ಥಾನಮಾನವನ್ನು ಪಡೆದುಕೊಳ್ಳುವುದು ಪರಿಸ್ಥಿತಿಯನ್ನು ವ್ಯತಿರಿಕ್ತಗೊಳಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಯಾವುದೇ ರಾಜ್ಯದಲ್ಲಿ ಹಿಂದೂ ವ್ಯಕ್ತಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸದ ಹೊರತು, ಪೀಠವು ಸಮಸ್ಯೆಯನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ.  ಪ್ರಸ್ತುತ ಅರ್ಜಿದಾರರು ಹೇಳಿರುವುದನ್ನು ಅರ್ಥಮಾಡಿಕೊಳ್ಳಲು ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಾವು ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಹಿಂದೂಗಳು ಅಲ್ಪಸಂಖ್ಯಾತರಾಗಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಗ್ರಹಿಕೆ ಇದೆ ಎಂದು ದಾತಾರ್ ವಾದಿಸಿದ್ದಾರೆ. “ಯಾವುದೇ ರಾಜ್ಯದಲ್ಲಿ ನಿಮಗೆ ಸ್ಥಾನಮಾನವನ್ನು ನಿರಾಕರಿಸಲಾಗಿದೆಯೇ? ನಾವು ಈಗ ಅದು ಹಾಗಿಲ್ಲ ಎಂದು ಪರಿಗಣಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.

“ನೀವು ಯಾವುದೇ ನಿರ್ದಿಷ್ಟ ಸಂಸ್ಥೆಯ ಅಧಿಸೂಚನೆಯನ್ನು ಸವಾಲು ಮಾಡುತ್ತಿದ್ದೀರಾ? ಶಾಸನಕ್ಕೆ ಸವಾಲು ಇದೆಯೇ? ಇದರಿಂದ ನೀವು ಪ್ರಭಾವಿತರಾಗಿದ್ದೀರಾ? ದಾತಾರ್ ಅವರೇ, ಅರ್ಜಿದಾರರು ಹೇಳುತ್ತಿರುವ ನೋವಿನ ಬಗ್ಗೆ ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.

ದಾತಾರ್ ಅವರು ಪೀಠಕ್ಕೆ ಪ್ರಶ್ನೆಗಳನ್ನು ಸ್ಪಷ್ಟಪಡಿಸುವುದಕ್ಕಾಗಿ ಒಂದು ವಾರದ ಕಾಲಾವಕಾಶವನ್ನು ಕೋರಿದರು. ಇದೇ ರೀತಿಯ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ಪೀಠವು ಪರಿಗಣಿಸುತ್ತಿದೆ ಎಂದು ಅವರು ಸೂಚಿಸಿದರು. ದಾತಾರ್ ಅವರ ಕೋರಿಕೆಯಂತೆ ನ್ಯಾಯಾಲಯವು ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಿತು.

ಕೆಲವು ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಹಿಂದೂಗಳು ಸಂಖ್ಯಾತ್ಮಕವಾಗಿ ಕಡಿಮೆ, ಆದರೆ ಅವರಿಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ನೀಡಲಾಗಿಲ್ಲ ಎಂಬುದು ಅರ್ಜಿದಾರರ ವಾದ. ಹಿಂದೂಗಳ ಅಂಕಿಅಂಶಗಳನ್ನು ಅವಲಂಬಿಸಿ, ಅರ್ಜಿದಾರರು ಈ ರೀತಿ ಮಾಹಿತಿ ನೀಡಿದ್ದಾರೆ. ಲಡಾಖ್‌ನಲ್ಲಿ ಶೇ 1, ಮಿಜೋರಾಂನಲ್ಲಿ ಶೇ 2.75 , ಲಕ್ಷದ್ವೀಪದಲ್ಲಿ ಶೇ 2.77, ಕಾಶ್ಮೀರದಲ್ಲಿ ಶೇ 4, ನಾಗಾಲ್ಯಾಂಡ್‌ನಲ್ಲಿ ಶೇ 8.74, ಮೇಘಾಲಯದಲ್ಲಿ ಶೇ 11.52, ಅರುಣಾಚಲ ಪ್ರದೇಶದಲ್ಲಿ ಶೇ 29, ಪಂಜಾಬ್‌ನಲ್ಲಿ ಶೇ 38.49 , ಮಣಿಪುರದಲ್ಲಿ ಶೇ 41.29 ಹಿಂದೂಗಳಿದ್ದಾರೆ. ಆದರೆ ಕೇಂದ್ರವು ಅವರನ್ನು ‘ಅಲ್ಪಸಂಖ್ಯಾತರು’ ಎಂದು ಘೋಷಿಸಿಲ್ಲ.

ಅದೇ ರೀತಿ ಲಕ್ಷದ್ವೀಪದಲ್ಲಿ ಶೇ 96.58, ಕಾಶ್ಮೀರದಲ್ಲಿ ಶೇ 95, ಲಡಾಖ್‌ನಲ್ಲಿ ಶೇ 46 ಇರುವ ಮುಸ್ಲಿಮರನ್ನು ಕೇಂದ್ರವು ಅಲ್ಪಸಂಖ್ಯಾತರೆಂದು ಘೋಷಿಸಿದೆ. ನಾಗಾಲ್ಯಾಂಡ್‌ನಲ್ಲಿ ಶೇ 88.10, ಮಿಜೋರಾಂನಲ್ಲಿ ಶೇ 87.16 ಮತ್ತು ಮೇಘಾಲಯದಲ್ಲಿ ಶೇ 74.59ಇರುವ ಕ್ರೈಸ್ತರನ್ನು ಕೇಂದ್ರವು ಅಲ್ಪಸಂಖ್ಯಾತರೆಂದು ಘೋಷಿಸಿದೆ. ಆದ್ದರಿಂದ, ಅವರು ಆರ್ಟಿಕಲ್ 30 ರ ಪ್ರಕಾರ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬಹುದು ಮತ್ತು ನಿರ್ವಹಿಸಬಹುದು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು,  ಅಲ್ಪಸಂಖ್ಯಾತರು ಎಂದು ಸೂಚಿಸಲು “ಕೇಂದ್ರಕ್ಕೆ ಅನಿಯಂತ್ರಿತ ಅಧಿಕಾರ” ನೀಡುವ ಎನ್​​ಸಿಎಂ ಕಾಯಿದೆ 1992 ರ ಸೆಕ್ಷನ್ 2(c) ಸ್ಪಷ್ಟವಾಗಿ ಅನಿಯಂತ್ರಿತ, ತರ್ಕಬಾಹಿರ ಮತ್ತು ಸಂವಿಧಾನದ 14, 15, 21, 29, 30 ವಿಧಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ.