ಮುಂಬೈ: ಸಿಲ್ವರ್ ಲೇಕ್ನಿಂದ ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆ RRVLನಲ್ಲಿ 7,500 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರ ಘೋಷಣೆ ಮಾಡಿವೆ.
ಸಿಲ್ವರ್ ಲೇಕ್ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ..
ಈ ಹೂಡಿಕೆಯು RRVL ಪ್ರೀ- ಮನಿ ಈಕ್ವಿಟಿ ಮೌಲ್ಯ 4.21 ಲಕ್ಷ ಕೋಟಿ ಮಾಡುತ್ತದೆ. ಸಿಲ್ವರ್ ಲೇಕ್ ಮಾಡಲಿರುವ ಹೂಡಿಕೆಗೆ RRVL ನಲ್ಲಿ 1.75 % ಈಕ್ವಿಟಿ ಷೇರಿನ ಪಾಲು ದೊರೆಯುತ್ತದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ನ ಎರಡನೇ ಅಂಗಸಂಸ್ಥೆಯಲ್ಲಿ ಸಿಲ್ವರ್ ಲೇಕ್ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ.
ಇದಕ್ಕೂ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆ ಜಿಯೋ ಪ್ಲಾಟ್ ಫಾರ್ಮ್ನಲ್ಲಿ 1.35 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು ಸಿಲ್ವರ್ ಲೇಕ್. ಅಂದ ಹಾಗೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ಎಂಬುದು RRVL ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ಎಂಎಸ್ ಎಂಇ ವಲಯಕ್ಕೆ ನೆರವು ನೀಡುವ ಉದ್ದೇಶ ಕೂಡ ಸಂಸ್ಥೆಗೆ ಇದೆ.
ನಾನಾ ಕಂಪನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ..
ಡಿಜಿಟಲೈಸೇಷನ್ ಮೂಲಕ ಎರಡು ಕೋಟಿಗೂ ಹೆಚ್ಚು ವರ್ತಕರಿಗೆ ಈ ಜಾಲವನ್ನು ವಿಸ್ತರಿಸುವುದಕ್ಕೆ ರಿಲಯನ್ಸ್ ರಿಟೇಲ್ ಬದ್ಧವಾಗಿದೆ. ಇನ್ನು ಸಿಲ್ವರ್ ಲೇಕ್ ಎಂಬುದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಮೇಲೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವ ಕಂಪೆನಿ. ವಿಶ್ವ ಮಟ್ಟದ ಮ್ಯಾನೇಜ್ಮೆಂಟ್ ತಂಡದ ಸಹಾಯದೊಂದಿಗೆ ಸಹಭಾಗಿತ್ವ ವಹಿಸಿ, ಅದ್ಭುತ ಕಂಪೆನಿಗಳನ್ನು ಕಟ್ಟಿ, ಬೆಳೆಸುವುದು ಸಿಲ್ವರ್ ಲೇಕ್ ಗುರಿ.
ಸಿಲ್ವರ್ ಲೇಕ್ ಒಟ್ಟಾರೆ ಆಸ್ತಿ ಮೌಲ್ಯವು 60 ಬಿಲಿಯನ್ ಅಮೆರಿಕನ್ ಡಾಲರ್ ದಾಟುತ್ತದೆ. ಈಗಾಗಲೇ ಏರ್ ಬಿಎನ್ ಬಿ, ಅಲಿಬಾಬ, ಆಲ್ಫಾಬೆಟ್ ನ ವೆರಿಲಿ ಮತ್ತು ಮೇಯ್ಮೋ ಯೂನಿಟ್ಸ್, ಡೆಲ್ ಟೆಕ್ನಾಲಜೀಸ್, ಟ್ವಿಟ್ಟರ್ ಸೇರಿದಂತೆ ಇತರ ಜಾಗತಿಕವಾದ ಟೆಕ್ನಾಲಜಿ ಕಂಪೆನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ.
ಹತ್ತಾರು ಲಕ್ಷ ಸಣ್ಣ ವರ್ತಕರಿಗೆ ಸಹಾಯವಾಗಲಿದೆ..
ಸಿಲ್ವರ್ ಲೇಕ್ ಹೂಡಿಕೆ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಎಂ.ಡಿ. ಮುಕೇಶ್ ಅಂಬಾನಿ ಮಾತನಾಡಿ, ಸಿಲ್ವರ್ ಲೇಕ್ ಜತೆಗೆ ಸಂಬಂಧ ವಿಸ್ತರಣೆ ಆಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ.
ಭಾರತದ ರೀಟೇಲ್ ವಲಯದಲ್ಲಿ ಭಾರತೀಯ ಗ್ರಾಹಕರಿಗೆ ಮೌಲ್ಯ ಒದಗಿಸುವ ಜತೆಗೆ ಹತ್ತಾರು ಲಕ್ಷ ಸಣ್ಣ ವರ್ತಕರನ್ನು ಒಳಗೊಳ್ಳುವುದು ಹಾಗೂ ಬದಲಾವಣೆ ತರುವುದು ನಮ್ಮ ಪ್ರಯತ್ನ. ಈ ವಲಯದಲ್ಲಿ ಬದಲಾವಣೆ ತರಲು ತಂತ್ರಜ್ಞಾನ ತುಂಬ ಮುಖ್ಯ ಎಂದಿದ್ದಾರೆ.
ಮುಂದುವರಿದು ಮಾತನಾಡಿ, ರೀಟೇಲ್ ವಲಯದ ಅಗತ್ಯಗಳೆಲ್ಲವನ್ನು ತಂತ್ರಜ್ಞಾನದ ಮೂಲಕ ಒಗ್ಗೂಡಿಸಬಹುದು. ಜತೆಗೆ ಬೆಳವಣಿಗೆಗೆ ವೇದಿಕೆಯೊಂದನ್ನು ನಿರ್ಮಿಸಬಹುದು. ಭಾರತೀಯ ರೀಟೇಲ್ ನಲ್ಲಿ ನಮ್ಮ ದೂರದೃಷ್ಟಿಯನ್ನು ಅನುಷ್ಠಾನಗೊಳಿಸುವಲ್ಲಿ ಸಿಲ್ವರ್ ಲೇಕ್ ಕಂಪೆನಿಯು ಬೆಲೆಯೇ ಕಟ್ಟಲಾಗದ ಭಾಗೀದಾರ ಎಂದು ಅಂಬಾನಿ ಹೇಳಿದ್ದಾರೆ.
ಸಮಾಜಕ್ಕೆ ಅನುಕೂಲ ಮಾಡಿಕೊಡುವ ಬದ್ಧತೆ..
ಸಿಲ್ವರ್ ಲೇಕ್ ಸಿಇಒ ಹಾಗೂ ಮ್ಯಾನೇಜಿಂಗ್ ಪಾರ್ಟನರ್ ಎಗೋನ್ ಡರ್ಬನ್ ಈ ಹೂಡಿಕೆ ಬಗ್ಗೆ ಮಾತನಾಡಿ, ಹೂಡಿಕೆ ಮೂಲಕ ರಿಲಯನ್ಸ್ ಜತೆಗಿನ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತಿದೆ. ಧೈರ್ಯದ ದೂರದೃಷ್ಟಿ, ಸಮಾಜಕ್ಕೆ ಅನುಕೂಲ ಮಾಡಿಕೊಡುವ ಬದ್ಧತೆ, ಆವಿಷ್ಕಾರದಲ್ಲಿ ಸಾಧನೆ ಹಾಗೂ ದಣವರಿಯದ ಅನುಷ್ಠಾನದ ಮೂಲಕ ಮುಕೇಶ್ ಅಂಬಾನಿ ಮತ್ತು ಅವರ ತಂಡ ರಿಲಯನ್ಸ್ ಮೂಲಕ ರೀಟೇಲ್ ವಲಯ ಹಾಗೂ ತಂತ್ರಜ್ಞಾನದಲ್ಲಿ ಅಮೋಘ ನಾಯಕತ್ವ ಸೃಷ್ಟಿ ಮಾಡಿದೆ ಎಂದಿದ್ದಾರೆ.
ಇಡೀ ವಿಶ್ವವು ಕೊರೊನಾದೊಂದಿಗೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅದರಲ್ಲೂ ಭಾರತದಲ್ಲಿ ಅಲ್ಪಾವಧಿಯಲ್ಲೇ ಜಿಯೋಮಾರ್ಟ್ ಯಶಸ್ಸು ಪಡೆದಿರುವುದು ನಿಜವಾಗಲೂ ಈ ಹಿಂದೆ ಕಂಡಿರದ ಸಾಧನೆ ಮತ್ತು ಬೆಳವಣಿಗೆ ಹಾದಿಯ ಆರಂಭವಷ್ಟೇ ಇದು. ರಿಲಯನ್ಸ್ ನ ಈ ಹೊಸ ವಾಣಿಜ್ಯ ವ್ಯೂಹವು ದಶಕದ ಅತಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ಆಗಿದೆ. ಭಾರತದ ರೀಟೇಲ್ ನಲ್ಲಿ ರಿಲಯನ್ಸ್ ಗುರಿಯ ಭಾಗವಾಗಿ ಸಹಭಾಗಿತ್ವ ವಹಿಸಲು ನಮಗೆ ಅತ್ಯಂತ ಖುಷಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೂಡಿಕೆ ವ್ಯವಹಾರವು ಕೆಲವು ನಿಯಮ ಹಾಗೂ ಅನುಮತಿಯ ಷರತ್ತಿಗೆ ಒಳಪಟ್ಟಿರುತ್ತದೆ.