AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಗಳಲ್ಲಿ ‘ಸಿಂಗಲ್-ಯೂಸ್’ ವೈದ್ಯಕೀಯ ಉಪಕರಣಗಳ ಮರುಬಳಕೆಗೆ ಕಂಪ್ಲೀಟ್ ಬ್ಯಾನ್: ಕೇಂದ್ರ ಆರೋಗ್ಯ ಸಚಿವಾಲಯದಿಂದ ಕಟ್ಟುನಿಟ್ಟಿನ ಆದೇಶ

ಕೇಂದ್ರ ಆರೋಗ್ಯ ಸಚಿವಾಲಯವು ಆಸ್ಪತ್ರೆಗಳಲ್ಲಿ 'ಸಿಂಗಲ್-ಯೂಸ್' ವೈದ್ಯಕೀಯ ಉಪಕರಣಗಳ ಮರುಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ರೋಗಿಗಳಿಗೆ ಮಾರಣಾಂತಿಕ ಸೋಂಕುಗಳು ಹರಡುವುದನ್ನು ತಡೆಯುವುದು ಹಾಗೂ ಸಾಧನ ವೈಫಲ್ಯ, ಆರ್ಥಿಕ ವಂಚನೆಯಂತಹ ಅಪಾಯಗಳನ್ನು ನಿವಾರಿಸುವುದು ಇದರ ಮುಖ್ಯ ಉದ್ದೇಶ. ನಿಯಮ ಮೀರಿದ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.

ಆಸ್ಪತ್ರೆಗಳಲ್ಲಿ ‘ಸಿಂಗಲ್-ಯೂಸ್’ ವೈದ್ಯಕೀಯ ಉಪಕರಣಗಳ ಮರುಬಳಕೆಗೆ ಕಂಪ್ಲೀಟ್ ಬ್ಯಾನ್: ಕೇಂದ್ರ ಆರೋಗ್ಯ ಸಚಿವಾಲಯದಿಂದ ಕಟ್ಟುನಿಟ್ಟಿನ ಆದೇಶ
ಉಪಕರಣಗಳು Image Credit source: Surgifact
ನಯನಾ ರಾಜೀವ್
|

Updated on: Oct 24, 2026 | 10:33 AM

Share

ನವದೆಹಲಿ, ಅಕ್ಟೋಬರ್ 24: ದೇಶಾದ್ಯಂತ ಇರುವ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ‘ಏಕ-ಬಳಕೆಯ ವೈದ್ಯಕೀಯ ಸಾಧನಗಳು’ ಮತ್ತು ಬಿಸಾಡಬಹುದಾದ ಶಸ್ತ್ರಚಿಕಿತ್ಸಾ ಪರಿಕರಗಳನ್ನು ಕ್ರಿಮಿನಾಶಕಗೊಳಿಸಿ ಮರುಬಳಕೆ ಮಾಡುವುದನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಒಮ್ಮೆ ಮಾತ್ರ ಬಳಸಬೇಕಾದ ಅತ್ಯಂತ ಸೂಕ್ಷ್ಮ ವೈದ್ಯಕೀಯ ಉಪಕರಣಗಳನ್ನು ಪದೇ ಪದೇ ಬಳಸುವುದರಿಂದ ರೋಗಿಗಳಿಗೆ ಮಾರಣಾಂತಿಕ ಸೋಂಕುಗಳು ಹರಡುವ ಅಪಾಯವಿದೆ ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಗಂಭೀರ ಎಚ್ಚರಿಕೆ ನೀಡಿದೆ. ಡಿಜಿಎಚ್​ಎಸ್ ಮುಖ್ಯಸ್ಥ ಡಾ. ಲವನೀಶ್ ಜಿ. ಕೃಷ್ಣ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಡ್ರಗ್ ಕಂಟ್ರೋಲರ್‌ಗಳಿಗೆ ಅಕ್ಟೋಬರ್ 16 ರಂದು ಈ ಸಂಬಂಧ ಕಟ್ಟುನಿಟ್ಟಿನ ಸುತ್ತೋಲೆ ಕಳುಹಿಸಿದ್ದಾರೆ.

ಯಾವೆಲ್ಲಾ ವಿಭಾಗಗಳಲ್ಲಿ ಮರುಬಳಕೆ ದಂಧೆ ನಡೆಯುತ್ತಿತ್ತು? ಕೇಂದ್ರ ಸರ್ಕಾರದ ತಪಾಸಣೆಯಲ್ಲಿ ಅತ್ಯಂತ ನಿರ್ಣಾಯಕ ವಿಭಾಗಗಳಲ್ಲೇ ಇಂತಹ ಅಪಾಯಕಾರಿ ಅಭ್ಯಾಸ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಹೃದಯಶಾಸ್ತ್ರ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗಳಲ್ಲಿ ಬಳಸಲಾಗುವ ಅತ್ಯಂತ ಸೂಕ್ಷ್ಮವಾದ ಕ್ಯಾತಿಟರ್‌ಗಳು (Catheters) ಮತ್ತು ಗೈಡ್‌ವೈರ್‌ಗಳು . ಕಿಡ್ನಿ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮಾಡುವಾಗ ಬಳಸುವ ಡಯಾಲಿಸರ್ ಮತ್ತು ಸಂಬಂಧಿತ ಟ್ಯೂಬ್‌ಗಳು.

ಇತರ ಶಸ್ತ್ರಚಿಕಿತ್ಸೆಗಳು: ನ್ಯೂರೋಸರ್ಜರಿ, ಆಂಕೊಲಾಜಿ (ಕ್ಯಾನ್ಸರ್), ಹೃದಯ ಮತ್ತು ನಾಳೀಯ ಶಸ್ತ್ರಚಿಕಿತ್ಸೆಗಳಲ್ಲಿ (CTVS) ಬಳಸುವ ಸರ್ಜಿಕಲ್ ಉಪಕರಣಗಳು ಹಾಗೂ ಸಾಮಾನ್ಯ ಸಿರಿಂಜ್‌ಗಳು,ಸೂಜಿಗಳು.

ರೋಗಿಗಳಿಗೆ ಎದುರಾಗುವ ಗಂಭೀರ ಅಪಾಯಗಳೇನು? ಅಡ್ಡ-ಸೋಂಕು : ಏಕ-ಬಳಕೆಯ ಸಾಧನಗಳನ್ನು ಎಷ್ಟೇ ಕ್ಲೀನ್ ಮಾಡಿದರೂ ಅವುಗಳಲ್ಲಿ ಸೂಕ್ಷ್ಮ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಉಳಿದುಕೊಂಡು ಹೆಪಟೈಟಿಸ್ ಬಿ, ಸಿ ಅಥವಾ ಎಚ್‌ಐವಿಯಂತಹ ಗಂಭೀರ ರಕ್ತ ಸಂಬಂಧಿತ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ:  ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ಕಿಮ್ಸ್ ಸಂಸ್ಥೆ ವೈದ್ಯರ ತಂಡ

ಸಾಧನ ವೈಫಲ್ಯ: ಈ ಉಪಕರಣಗಳನ್ನು ಕೇವಲ ಒಂದು ಬಾರಿ ಮಾತ್ರ ಬಳಸಲು ವಿನ್ಯಾಸಗೊಳಿಸಲಾಗಿರುತ್ತದೆ. ಇವುಗಳನ್ನು ಪುನಃ ಬಿಸಿಮಾಡಿ ಕ್ರಿಮಿನಾಶಕಗೊಳಿಸಿದಾಗ ಅವುಗಳ ರಚನೆ ದುರ್ಬಲಗೊಂಡು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದುಬೀಳುವ ಅಥವಾ ಸರಿಯಾಗಿ ಕೆಲಸ ಮಾಡದಿರುವ ಅಪಾಯವಿರುತ್ತದೆ.

ಆರ್ಥಿಕ ವಂಚನೆ: ಮರುಬಳಕೆಯ ಸಾಧನಗಳನ್ನು ಅಳವಡಿಸಿದರೂ, ರೋಗಿಗಳಿಗೆ ಅಥವಾ ಸರ್ಕಾರಿ ವಿಮಾ ಯೋಜನೆಗಳಿಗೆ (CGHS, ಆಯುಷ್ಮಾನ್ ಭಾರತ್) ಹೊಸ ಉಪಕರಣದ ಪೂರ್ಣ ವೆಚ್ಚವನ್ನು ವಿಧಿಸಿ ಹಣ ಲೂಟಿ ಮಾಡಲಾಗುತ್ತಿತ್ತು.

ಕಾಯ್ದೆಗಳ ಉಲ್ಲಂಘನೆ ಮತ್ತು ಕಠಿಣ ಕ್ರಮದ ಎಚ್ಚರಿಕೆ ಈ ರೀತಿಯ ಮರುಬಳಕೆಯು ಈ ಕೆಳಗಿನ ಪ್ರಮುಖ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂದು ಡಿಜಿಎಚ್‌ಎಸ್ ಸ್ಪಷ್ಟಪಡಿಸಿದೆ:

ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940 (Drugs and Cosmetics Act)

ವೈದ್ಯಕೀಯ ಸಾಧನಗಳ ನಿಯಮಗಳು, 2017 (Medical Devices Rules)

ಕ್ಲಿನಿಕಲ್ ಸಂಸ್ಥೆಗಳ ಕಾಯ್ದೆ, 2010 (Clinical Establishments Act)

ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು (Biomedical Waste Management Rules)

ಭಾರತೀಯ ವೈದ್ಯಕೀಯ ಸಾಧನ ಉದ್ಯಮ ಸಂಘಟನೆ ಕೇಂದ್ರದ ಈ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದೆ. ತಯಾರಕರ ಸೂಚನೆಗಳನ್ನು ಉಲ್ಲಂಘಿಸಿ ಆಸ್ಪತ್ರೆಗಳು ಉಪಕರಣಗಳನ್ನು ಮರುಬಳಕೆ ಮಾಡಿ ರೋಗಿಗಳಿಗೆ ಅನಾಹುತವಾದರೆ ಅದಕ್ಕೆ ಆಸ್ಪತ್ರೆ ಆಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಸಂಘಟನೆಯ ಸಂಯೋಜಕ ರಾಜೀವ್ ನಾಥ್ ಹೇಳಿದ್ದಾರೆ.

ಆಸ್ಪತ್ರೆಗಳ ತಪಾಸಣೆ: ರಾಜ್ಯ ಔಷಧ ನಿಯಂತ್ರಕರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಿದ್ದು, ನಿಯಮ ಮೀರಿ ಮರುಬಳಕೆ ಮಾಡುವ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More