ಛತ್ತೀಸ್ಗಢ್: ತೆಲಂಗಾಣ ಮತ್ತು ಛತ್ತೀಸ್ಗಢ್ ಗಡಿ ಪ್ರದೇಶದ ಕಿಸ್ತಾರಾಮ್ ಪಿಎಸ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆರು ಮಂದಿ ನಕ್ಸಲರನ್ನು ಪೊಲೀಸರು ಹತ್ಯೆ (Naxals killed) ಮಾಡಿದ್ದಾರೆ. ಛತ್ತೀಸ್ಗಢ್ ಮತ್ತು ತೆಲಂಗಾಣ ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಎಸ್ಪಿ ಸುನಿಲ್ ದತ್ತ ತಿಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಇನ್ನೂ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.
ಛತ್ತೀಸ್ಗಢ್ನಲ್ಲಿ ನಕ್ಸಲ್ರ ಕಾಟ ಯಾವಾಗಲೂ ಹೆಚ್ಚು. ಇಲ್ಲಿ ಅದೆಷ್ಟೋ ಮುಗ್ಧ ನಾಗರಿಕರು, ಪೊಲಿಸ್, ರಕ್ಷಣಾ ಸಿಬ್ಬಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಇಲ್ಲಿ ಪದೇಪದೆ ನಕ್ಸಲರು ಮತ್ತು ರಕ್ಷಣಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಹಾಗೇ ನಿನ್ನೆ ತೆಲಂಗಾಣ ಗ್ರೇ ಹೌಂಡ್ಸ್ ಪೊಲೀಸರು ಮತ್ತು ನಕ್ಸಲರ ನಡುವೆ ಎನ್ಕೌಂಟರ್ ಶುರುವಾಗಿತ್ತು. ಮೊದಲು ಛತ್ತೀಸ್ಗಢ್ನ ನಾರಾಯಣಪುರ ಜಿಲ್ಲೆಯಲ್ಲಿ ತೆಲಂಗಾಣ ಪೊಲೀಸರು ಎರಡು ಸುಧಾರಿತ ಸ್ಫೋಟಕ ಸಾಧಕ (IED)ಗಳನ್ನು ವಶಪಡಿಸಿಕೊಂಡರು. ಅದರ ಬೆನ್ನಲ್ಲೇ ಆ್ಯಂಟಿ-ನಕ್ಸಲ್ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಅಂದಹಾಗೆ ನಕ್ಸಲರು ಈ ಐಇಡಿಯನ್ನು ಭದ್ರತಾ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿಯೇ ಇಟ್ಟಿದ್ದರು ಎಂದು ಹೇಳಲಾಗಿದೆ.
ಮೃತಪಟ್ಟ ಆರು ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಇವರೆಲ್ಲ ಚೆರ್ಲಾ ಪ್ರದೇಶ ಸಮಿತಿಯವರು ಎಂದು ಹೇಳಲಾಗಿದ್ದು, ನಕ್ಸಲರ ಹಿರಿಯ ನಾಯಕರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿನ್ನೆಯಿಂದಲೂ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದರು. ಐಇಡಿ ಸ್ಫೋಟಕ್ಕೂ ಮೊದಲು ಅವರ ಸಂಚಿನ ಸುಳಿವು ಸಿಕ್ಕಿದೆ. ಇಲ್ಲದೆ ಇದ್ದರೆ ಭದ್ರತಾ ಸಿಬ್ಬಂದಿ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು ಎಂದು ಸುನಿಲ್ ದತ್ತ ತಿಳಿಸಿದ್ದಾರೆ.
ಇದನ್ನೂ ಓದಿ: GST: ಹೊಸ ವರ್ಷಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ