ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ದಕ್ಷಿಣ ಕೊಯಮತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವನತಿ ಶ್ರೀನಿವಾಸನ್ ಪರ ಪ್ರಚಾರ ನಡೆಸಿದ ಅವರು, ತಮಿಳುನಾಡಿನ ಸಾಂಪ್ರದಾಯಿಕ ನೃತ್ಯವನ್ನೂ ಮಾಡಿದರು. ಅಷ್ಟೇ ಅಲ್ಲ, ಬೈಕ್, ಆಟೋದಲ್ಲಿ ಕೂಡ ಸಂಚರಿಸಿ ಮತ ಯಾಚನೆ ಮಾಡಿದ್ದಾರೆ. ಈ ಫೋಟೋ, ವಿಡಿಯೋಗಳು ವೈರಲ್ ಆಗಿವೆ.
ಇನ್ನು ಸ್ಮೃತಿ ಇರಾನಿ ಸ್ವತಃ ದ್ವಿಚಕ್ರವಾಹನ ಓಡಿಸಿದ್ದು, ಇನ್ನೊಂದು ಸ್ಕೂಟರ್ನಲ್ಲಿ ವನತಿ ಶ್ರೀನಿವಾಸನ್ ಇದ್ದರು. ನಂತರ ಇವರಿಬ್ಬರೂ ಸೇರಿ ಬಿಜೆಪಿ ಕಾರ್ಯಕರ್ತೆಯರ ಜತೆ ಸೇರಿ ಸಾಂಪ್ರದಾಯಿಕ ನೃತ್ಯ ಮಾಡಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 118 ಮ್ಯಾಜಿಕ್ ನಂಬರ್. ಅಂದರೆ ಸರ್ಕಾರ ರಚಿಸಲು 118 ಸೀಟುಗಳು ಸಾಕು. ಇಲ್ಲಿ ಬಿಜೆಪಿ AIADMKಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ತಮಿಳುನಾಡಿನಲ್ಲಿ ಪ್ರಚಾರ ನಡೆಸಿದ್ದರು. ಇಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳ ಮೊದಲ ಹಂತದ ಮತದಾನ ನಡೆದಿದ್ದು, ಏಪ್ರಿಲ್ 6ರಂದು ಕೇರಳ, ತಮಿಳು ನಾಡು, ಪುದುಚೇರಿಯಲ್ಲಿ ಎಲೆಕ್ಷನ್ ಇರಲಿದೆ. ಈ ಪಂಚರಾಜ್ಯಗಳ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಮತ ಸೆಳೆಯುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.
#WATCH Coimbatore: Union Minister Smriti Irani performs traditional dance* with BJP workers, as a part of election campaigning for Vanathi Srinivasan, the party’s candidate from Coimbatore South constituency.#TamilNaduElections pic.twitter.com/1S6zQF2RgL
— ANI (@ANI) March 27, 2021