ದೆಹಲಿ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇದೀಗ ಬದ್ಧ ವೈರಿಗಳಾದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಂದಾಗಿವೆ. ಶಿವಸೇನೆ ಮತ್ತು ಎನ್ಸಿಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ.
ಮೈತ್ರಿ ಬಗ್ಗೆ ಖಚಿತ ಪಡಿಸಿದ ಎನ್ಸಿಪಿ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಸಮ್ಮತಿ ದೊರೆತಿದೆ ಎಂದಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಸಭೆ ಸೇರಿ ಹೊಸ ಸರ್ಕಾರ ರಚನೆ ಸಂಬಂಧ ಅಂತಿಮ ಮಾತುಕತೆ ನಡೆಸಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ವಿಚಾರದಲ್ಲಿ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಹೊಂದಲು ಶಿವಸೇನೆ, ಎನ್ಸಿಪಿ ಜತೆ ಮಾತುಕತೆ ಫೈನಲ್ ಆಗಿದ್ದು, ಕಾಂಗ್ರೆಸ್ಗೆ ಡಿಸಿಎಂ ಸ್ಥಾನ ನೀಡಲು ಒಪ್ಪಿಗೆ ದೊರೆತಿದೆ. ಇದೇ ವೇಳೆ, ಶಾಸಕರ ಸಂಖ್ಯೆ ಆಧಾರದಲ್ಲಿ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ಗೆ ಸಚಿವ ಸ್ಥಾನಗಳು ಹಂಚಿಕೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
Published On - 5:27 pm, Wed, 20 November 19