ದೆಹಲಿ ಜೂನ್ 03: ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬ್ರಹ್ಮೋಸ್‌ನ (Brahmos) ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ಗೆ (Nishant Agarwal) ನಾಗ್ಪುರ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಬ್ರಹ್ಮೋಸ್ ಕ್ಷಿಪಣಿಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ (Pakistan ISI) ಸೋರಿಕೆ ಮಾಡಿದ ಆರೋಪದ ಮೇಲೆ 2018 ರಲ್ಲಿ ನಿಶಾಂತ್ ಅಗರ್ವಾಲ್ನ್ನು ಬಂಧಿಸಲಾಗಿತ್ತು. ಅಗರ್ವಾಲ್ ಬ್ರಹ್ಮೋಸ್ನಲ್ಲಿ ಹಿರಿಯ ಸಿಸ್ಟಮ್ ಎಂಜಿನಿಯರ್ ಆಗಿದ್ದರು. ಇದು DRDO ಮತ್ತು ರಷ್ಯಾದ ಮಿಲಿಟರಿ ಕೈಗಾರಿಕಾ ಒಕ್ಕೂಟದ (NPO Mashinostroyenia) ನಡುವಿನ ಜಂಟಿ ಉದ್ಯಮವಾಗಿದ್ದು, ಭಾರತದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಲ್ಲಿ ಕೆಲಸ ಮಾಡಿದೆ. ಇದನ್ನು ಭೂಮಿ, ಗಾಳಿ, ಸಮುದ್ರ ಮತ್ತು ನೀರಿನ ಅಡಿಯಲ್ಲಿ ಉಡಾವಣೆ ಮಾಡಬಹುದಾಗಿದೆ.
ಅಗರ್ವಾಲ್‌ಗೆ ಕೋರ್ಟ್ 14 ವರ್ಷಗಳ ಕಠಿಣ ಸೆರೆವಾಸ ಮತ್ತು ₹ 3,000 ದಂಡವನ್ನೂ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ದೇಶಪಾಂಡೆ ಅವರು ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯ (ಒಎಸ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 235 ರ ಅಡಿಯಲ್ಲಿ ಅಗರ್ವಾಲ್ ಅವರನ್ನು ದೋಷಿ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
‘‘ಅಧಿಕೃತ ರಹಸ್ಯ ಕಾಯಿದೆಯಡಿ ನ್ಯಾಯಾಲಯವು ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ ಮತ್ತು 14 ವರ್ಷಗಳ ಕಾಲ ಕಠಿಣ ಸೆರೆವಾಸ ಮತ್ತು ₹3,000 ದಂಡ ವಿಧಿಸಿದೆ,’’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ವಜಾನಿ ಹೇಳಿದ್ದಾರೆ.
ಅಗರ್ವಾಲ್‌ಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಕಳೆದ ಏಪ್ರಿಲ್‌ನಲ್ಲಿ ಜಾಮೀನು ನೀಡಿತ್ತು.
2018 ರಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಗೆ ಸಂಬಂಧಿಸಿದ ಈ ಪ್ರಕರಣ ನಡೆದಿತ್ತು. ನೇಹಾ ಶರ್ಮಾ ಮತ್ತು ಪೂಜಾ ರಂಜನ್ ಎಂಬ ಎರಡು ಫೇಸ್‌ಬುಕ್ ಖಾತೆಗಳ ಮೂಲಕ ಅಗರ್ವಾಲ್ ಶಂಕಿತ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು. ಇಸ್ಲಾಮಾಬಾದ್ ಮೂಲದ ಈ ಖಾತೆಗಳನ್ನು ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರು ನಡೆಸುತ್ತಿದ್ದಾರೆ ಎಂದು ನಂಬಲಾಗಿದೆ.
ಇದನ್ನೂ ಓದಿ: 150 ಜಿಲ್ಲಾಧಿಕಾರಿಗಳಿಗೆ ಅಮಿತ್ ಶಾ ಕರೆ ಆರೋಪ, ವದಂತಿ ಹರಡಿ ಅವಮಾನಿಸುವುದು ತಪ್ಪು ಎಂದ ರಾಜೀವ್ ಕುಮಾರ್
ನಿಶಾಂತ್ ಅಗರ್ವಾಲ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಯುವ ವಿಜ್ಞಾನಿಗಳಿಗೆ ಕೊಡುವ ಪ್ರಶಸ್ತಿ ವಿಜೇತರಾಗಿದ್ದರು.ಆದ್ದರಿಂದ ಅವರು ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಕುರುಕ್ಷೇತ್ರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ ನಿಶಾಂಕ್ ಪ್ರತಿಭಾನ್ವಿತ ಇಂಜಿನಿಯರ್ ಎಂದು ಹೆಸರುಗಳಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನಿಶಾಂತ್ ಅತ್ಯಂತ ಸೂಕ್ಷ್ಮವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ, ಅಂತರ್ಜಾಲ ಬಳಸಿದ್ದರಿಂದ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Mon, 3 June 24