- Kannada News Photo gallery Cricket photos T20 World Cup 2024: Kamran Akmal's IND vs PAK Match Prediction
IND vs PAK: ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ
T20 World Cup 2024: ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು 7 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡವು ಕೇವಲ ಒಂದು ಬಾರಿ ಮಾತ್ರ ಗೆಲುವು ದಾಖಲಿಸಿದೆ. ಹೀಗಾಗಿ ಈ ಸಲ ಕೂಡ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.
Updated on: Jun 01, 2024 | 7:58 AM

ಟಿ20 ವಿಶ್ವಕಪ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳೆಯಿಂದ (ಜೂನ್ 2) 9ನೇ ಆವೃತ್ತಿಯ ಚುಟುಕು ಕ್ರಿಕೆಟ್ ಕದನಕ್ಕೆ ಚಾಲನೆ ದೊರೆಯಲಿದೆ. ಟೂರ್ನಿ ಆರಂಭದ ಮೊದಲ ವಾರದಲ್ಲೇ ಭಾರತ ಮತ್ತು ಪಾಕಿಸ್ತಾನ್ (IND vs PAK) ನಡುವಣ ಹೈವೋಲ್ಟ್ ಕದನ ನಡೆಯಲಿರುವುದು ವಿಶೇಷ. ಅಂದರೆ ಮುಂದಿನ ಭಾನುವಾರ ನ್ಯೂಯಾರ್ಕ್ನಲ್ಲಿ ಇಂಡೊ-ಪಾಕ್ ಕಾದಾಟ ಜರುಗಲಿದೆ.

ಈ ಮದಗಜಗಳ ಕಾಳಗದಲ್ಲಿ ಗೆಲ್ಲೋರು ಯಾರು ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದ್ದು, ಈ ನಡುವೆ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಮಹತ್ವದ ಪಂದ್ಯದಲ್ಲಿ ಯಾರು ಗೆಲ್ತಾರೆ? ಎಂದು ಪಾಕ್ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮ್ರಾನ್ ಅಕ್ಮಲ್, ಖಂಡಿತವಾಗಿಯೂ ಭಾರತ. ಅದರಲ್ಲಿ ಡೌಟೇ ಬೇಡ. ಪಾಕಿಸ್ತಾನ್ ತಂಡಕ್ಕೆ ಟೀಮ್ ಇಂಡಿಯಾವನ್ನು ಸೋಲಿಸಲಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಇದಕ್ಕೆ ಕಾರಣವನ್ನು ನೀಡಿರುವ ಕಮ್ರಾನ್, ಪಾಕಿಸ್ತಾನ್ ಕ್ರಿಕೆಟ್‌ನ ಮಟ್ಟ ಎಲ್ಲರಿಗೂ ತಿಳಿದಿದೆ. ನಾವು ಐರ್ಲೆಂಡ್‌ನಂತಹ ಸಣ್ಣ ತಂಡಗಳ ವಿರುದ್ಧ ಸೋಲುತ್ತಿದ್ದೇವೆ. ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ಇತರ ಯಾವುದೇ ತಂಡವಾಗಿದ್ದರೆ ಪರವಾಗಿಲ್ಲ ಎನ್ನಬಹುದು. ಆದರೆ ಸಣ್ಣ ಪುಟ್ಟ ತಂಡಗಳ ವಿರುದ್ಧ ಮುಗ್ಗರಿಸುತ್ತಿರುವ ಪಾಕಿಸ್ತಾನ್ ಭಾರತದ ವಿರುದ್ಧದ ಗೆಲ್ಲುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ ಎಂದು ಕಮ್ರಾನ್ ಅಕ್ಮಲ್ ಪ್ರಶ್ನಿಸಿದ್ದಾರೆ.

ಇದೀಗ ಭಾರತೀಯ ಆಟಗಾರರು ಐಪಿಎಲ್ ಮುಗಿಸಿ ಬಂದಿದ್ದಾರೆ. ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲರ್‌ಗಳು ಮತ್ತು ಬ್ಯಾಟರ್‌ಗಳು 40 ರಿಂದ 50,000 ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಿ ಬಂದಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಂದರೆ ಅಲ್ಲಿ ಆಡುವುದು ಕಠಿಣ ಕ್ರಿಕೆಟ್ ಮತ್ತು ಗುಣಮಟ್ಟದ ಕ್ರಿಕೆಟ್. ಇಂತಹ ಎಲ್ಲಾ ತಯಾರಿಗಳೊಂದಿಗೆ ಬಂದಿರುವ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ಅನುಮಾನವೇ ಬೇಡ ಎಂದಿದ್ದಾರೆ.

ಇದೀಗ ಪಾಕ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ನೀಡಿರುವ ಹೇಳಿಕೆ, ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲ ಪಾಕ್ ಅಭಿಮಾನಿಗಳು ಮಾಜಿ ಕ್ರಿಕೆಟಿಗನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಪ್ರಸ್ತುತ ಪಾಕಿಸ್ತಾನ್ ತಂಡದ ಪ್ರದರ್ಶನ ಗಮನಿಸಿದರೆ ಅಕ್ಮಲ್ ಅವರ ಮಾತು ನಿಜವಾಗಲಿದೆ ಎಂದಿದ್ದಾರೆ.



















