
ಶ್ರೀನಗರ, ನವೆಂಬರ್ 15: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ (Jammu And Kashmir) ನೌಗಾಂ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಪೋಟ (Nowgam Blast), ಪೊಲೀಸ್ ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯ ಸಾವಿಗೆ ಕಾರಣವಾಗಿದೆ. ಅಲ್ಲದೆ, ಘಟನೆಯಲ್ಲಿ ಸುಮಾರು 27 ಮಂದಿ ಗಾಯಗೊಂಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕಗಳೇ ಬ್ಲಾಸ್ಟ್ ಆಗಿದ್ದು ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಹಾಗಾದರೆ, ಸ್ಫೋಟಕಗಳನ್ನು ಸಂಗ್ರಹಿಸಿ ಇಡುವಾಗ ಆದ ಲೋಪದಿಂದ ಸ್ಫೋಟ ಸಂಭವಿಸಿತೇ? ಅಥವಾ ಅವುಗಳಿಗೆ ಟೈಮರ್ ಫಿಕ್ಸ್ ಮಾಡಲಾಗಿತ್ತೇ? ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕಳೆದ ವಾರ ನವದೆಹಲಿಯ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿ 13 ಮಂದಿ ಸಾವಿಗೀಡಾಗಿದ್ದರು. ಅದಕ್ಕೂ ಮುನ್ನ ದೊಡ್ಡ ಪ್ರಮಾಣದ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹರಿಯಾಣದ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಅವುಗಳ ಪೈಕಿ, ಬಂಧಿತ ಉಗ್ರ ವೈದ್ಯ ಮುಜಮ್ಮಿಲ್ ಗನೈ ಬಾಡಿಗೆ ಮನೆಯಿಂದ ವಶಪಡಿಸಿಕೊಂಡ 360 ಕಿಲೋದಷ್ಟು ಸ್ಫೋಟಕಗಳ ಪೈಕಿ ಒಂದಷ್ಟು ಮಾದರಿಯನ್ನು ನೌಗಾಮ್ ಪೊಲೀಸ್ ಠಾಣೆಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ಮೂಲಗಳ ಪ್ರಕಾರ, ಘಟನಾ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಸ್ಫೋಟಕಗಳು ಇದ್ದವು. ಎಫ್‌ಎಸ್‌ಎಲ್ ತಂಡವು ಕಳೆದ ಎರಡು ದಿನಗಳಿಂದ ಇದರ ಬಗ್ಗೆ ತನಿಖೆ ನಡೆಸುತ್ತಿದೆ. ತಜ್ಞರ ಪ್ರಕಾರ, ಇದು ಮಾನವ ದೋಷ ಅಥವಾ ಲೋಪದಿಂದ ಆದ ಸ್ಫೋಟವಲ್ಲ. ಬದಲಿಗೆ, ತಾಪಮಾನ, ರಾಸಾಯನಿಕ ಸಂಯೋಜನೆ ಮತ್ತು ಕೆಲವು ವಿಶೇಷ ಅಂಶಗಳಿಗೆ ಸ್ಫೋಟಕಗಳು ಒಡ್ಡಿಕೊಂಡಾಗ ಸ್ಫೋಟ ಸಂಭವಿಸಿರಬಹುದು. ಇದರೊಂದಿಗೆ, ದೆಹಲಿ ಸ್ಫೋಟವು ರಾಸಾಯನಿಕ ಪ್ರಕ್ರಿಯೆಯಿಂದ ಉಂಟಾಗಿದೆಯೇ ಅಥವಾ ಅದಕ್ಕೆ ಟೈಮರ್ ಬಳಸಲಾಗಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಬಗ್ಗೆ ತನಿಖಾ ತಂಡ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರು ಸೇರಿ 9 ಮಂದಿ ಸಾವು
ಮತ್ತೊಂದು ಮೂಲಗಳ ಪ್ರಕಾರ, ಫರಿದಾಬಾದ್ನಿಂದ ಪೊಲೀಸ್ ಠಾಣೆಗೆ ಅಮೋನಿಯಂ ನೈಟ್ರೇಟ್ ತರಲಾಗಿತ್ತು. ಅದನ್ನು ನಿರ್ವಹಿಸುವಾಗ ಲೋಪ ಸಂಭವಿಸಿ ಸ್ಫೋಟ ಸಂಭವಿಸಿರಬಹುದು ಎಂದೂ ಎಂದು ಹೇಳಲಾಗುತ್ತಿದೆ. ಅಮೋನಿಯಂ ನೈಟ್ರೇಟ್ ಒಂದು ಸೂಕ್ಷ್ಮ ರಾಸಾಯನಿಕ. ಅದನ್ನು ನಿರ್ವಹಿಸುವಾಗ ಆದ ಯೆಡವಟ್ಟುಗಳಿಂದ ಅನೇಕರು ಸಾವನ್ನಪ್ಪಿರುವ ಘಟನೆಗಳು ಈ ಹಿಂದೆಯೂ ನಡೆದಿವೆ.
ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟವು ಅತ್ಯಂತ ಶಕ್ತಿಶಾಲಿಯಾಗಿತ್ತು. ಪೊಲೀಸ್ ಠಾಣೆಗೆ ತೀವ್ರ ಹಾನಿಯಾಗಿತ್ತು. ಇದರಿಂದಾಗಿ ರಕ್ಷಣಾ ತಂಡಕ್ಕೆ ಅವಶೇಷಗಳನ್ನು ತೆರವುಗೊಳಿಸಲು ಮತ್ತು ಜನರನ್ನು ರಕ್ಷಿಸುವುದು ಕಷ್ಟವಾಯಿತು. ಅಗ್ನಿಶಾಮಕ ದಳವು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರಿಂದ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು. ಏತನ್ಮಧ್ಯೆ, ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಛಿದ್ರ ಛಿದ್ರವಾದ ಕೈಕಾಲುಗಳು 300 ಅಡಿ ದೂರದಲ್ಲಿ ಹಾರಿಬಿದ್ದಿದ್ದವು. ಸ್ಫೋಟದ ಶಬ್ದವು ಶ್ರೀನಗರದಿಂದ ದಕ್ಷಿಣಕ್ಕೆ ಹಲವಾರು ಕಿಲೋಮೀಟರ್ ದೂರದಲ್ಲಿ ಕೇಳಿಬಂದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ