SSB Recruitment 2026: ಸಶಸ್ತ್ರ ಸೀಮಾ ಬಲದಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ; ಕ್ರೀಡಾಪಟುಗಳಿಗೆ ಸುವರ್ಣಾವಕಾಶ!
ಸಶಸ್ತ್ರ ಸೀಮಾ ಬಲ್ (SSB) ಕ್ರೀಡಾ ಕೋಟಾದಡಿ 404 ಕಾನ್ಸ್‌ಟೇಬಲ್ (GD) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಉತ್ತೀರ್ಣರಾಗಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ 18ರಿಂದ 23 ವರ್ಷದ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಇಲ್ಲ, ಕ್ರೀಡಾ ಸಾಧನೆ ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಆಕರ್ಷಕ ವೇತನದ ಜೊತೆಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

ಪೊಲೀಸ್ ಮತ್ತು ರಕ್ಷಣಾ ಇಲಾಖೆಯ ಉದ್ಯೋಗಗಳಿಗಾಗಿ ಕಾಯುತ್ತಿರುವ ದೇಶದ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ್ (SSB), ಕ್ರೀಡಾ ಕೋಟಾದಡಿಯಲ್ಲಿ (Sports Quota) ಹೆಚ್ಚಿನ ಸಂಖ್ಯೆಯ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 404 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಅರ್ಹ ಕ್ರೀಡಾಪಟುಗಳು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ಕೆಯಾದವರಿಗೆ ಆಕರ್ಷಕ ಸಂಬಳ ಮತ್ತು ಭತ್ಯೆಗಳೊಂದಿಗೆ ಕೇಂದ್ರ ಸರ್ಕಾರಿ ಕೆಲಸ ಲಭಿಸಲಿದೆ.
ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನೆಲೆ:
ಈ ಕಾನ್ಸ್‌ಟೇಬಲ್ (ಜಿಡಿ) ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಾಲಿಬಾಲ್, ಕಬಡ್ಡಿ, ಅಥ್ಲೆಟಿಕ್ಸ್, ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಹಾಕಿ, ಈಜು, ಕುಸ್ತಿ, ಯೋಗಾಸನ, ಜೂಡೋ, ಟೇಕ್ವಾಂಡೋ, ಪವರ್‌ಲಿಫ್ಟಿಂಗ್ ಸೇರಿದಂತೆ ಇನ್ನು ಪ್ರಮುಖ ಕ್ರೀಡಾ ವಿಭಾಗಗಳ ಕ್ರೀಡಾಪಟುಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಹತೆ:
ವಿದ್ಯಾರ್ಹತೆಯ ವಿಷಯಕ್ಕೆ ಬಂದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಅಭ್ಯರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು. ಹಿರಿಯ ಅಥವಾ ಕಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅಥವಾ ‘ಖೇಲೋ ಇಂಡಿಯಾ’ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯಸ್ಸು ಮತ್ತು ಮೀಸಲಾತಿ ವಿವರ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳನ್ವಯ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ದೈಹಿಕ ಅರ್ಹತೆಗಳ ವಿಷಯದಲ್ಲಿ, ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 170 ಸೆಂ.ಮೀ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ ಎತ್ತರ ನಿಗದಿಪಡಿಸಲಾಗಿದೆ. ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಎತ್ತರದಲ್ಲಿ ಸಡಿಲಿಕೆ ಇರಲಿದ್ದು, ಪುರುಷ ಅಭ್ಯರ್ಥಿಗಳಿಗೆ ಎದೆಯ ಅಳತೆಯ ನಿರ್ದಿಷ್ಟ ಮಾನದಂಡಗಳು ಅನ್ವಯಿಸುತ್ತವೆ. ಜೊತೆಗೆ ಅಭ್ಯರ್ಥಿಗಳ ಬಿಎಂಐ (BMI) 18 ರಿಂದ 25 ರ ನಡುವೆ ಇರಬೇಕಾಗುತ್ತದೆ.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ಆಕರ್ಷಕ ಮೂಲ ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,700 ರಿಂದ ರೂ. 69,100 ರವರೆಗೆ ಆಕರ್ಷಕ ಮೂಲ ವೇತನದೊಂದಿಗೆ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ಮತ್ತು ಪಿಂಚಣಿ ಸೌಲಭ್ಯಗಳು ಸಿಗಲಿವೆ. ಅರ್ಜಿ ಶುಲ್ಕದ ವಿವರ ನೋಡುವುದಾದರೆ, ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ ರೂ. 100 ಶುಲ್ಕವಿದ್ದು, SC, ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಅಭ್ಯರ್ಥಿಗಳ ಕ್ರೀಡಾ ಸಾಧನೆ ಮತ್ತು ಪದಕಗಳ ಆಧಾರದ ಮೇಲೆ ಅಂಕಗಳನ್ನು ನೀಡಿ, ತದನಂತರ ಪ್ರಮಾಣಪತ್ರ ಪರಿಶೀಲನೆ, ದೈಹಿಕ ಗುಣಮಟ್ಟ ಪರೀಕ್ಷೆ (PST) ಹಾಗೂ ವೈದ್ಯಕೀಯ ತಪಾಸಣೆಯನ್ನು ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಶಸ್ತ್ರ ಸೀಮಾ ಬಲ್‌ನ ಅಧಿಕೃತ ವೆಬ್‌ಸೈಟ್ ಆದ ssb.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ. ದೇಶದ ಸೇವೆ ಮಾಡಲು ಬಯಸುವ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಯುವಜನತೆಗೆ ಇದೊಂದು ಅತ್ಯುತ್ತಮ ಮತ್ತು ಗೌರವಾನ್ವಿತ ಅವಕಾಶವಾಗಿದ್ದು, ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





