ಇತ್ತೀಚೆಗೆ ಧರ್ಮ ಸಂಸದ್ ಹೆಸರಲ್ಲಿ ನಡೆದ ಕೆಲವು ವಿವಾದಗಳ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಧರ್ಮ ಸಂಸದ್ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಏನೆನೆಲ್ಲ ಹೇಳಿಕೆಗಳನ್ನು ನೀಡಲಾಯಿತೋ, ಅವ್ಯಾವವೂ ಹಿಂದೂ ಶಬ್ದಗಳಲ್ಲ, ಹಿಂದೂ ಮನಸ್ಥಿತಿಯಲ್ಲ, ಹಿಂದುಗಳು ಮಾಡುವ ಕೆಲಸವೂ ಅಲ್ಲ ಎಂದು ಹೇಳಿದ್ದಾರೆ.ನಾಗ್ಪುರದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಹಿಂದುತ್ವ ಹೃದಯವುಳ್ಳ ಯಾರೂ ಇಂಥ ಮಾತುಗಳನ್ನಾಡುವುದಿಲ್ಲ. ಯಾರೆಲ್ಲ ಹಿಂದುತ್ವದ ಪರಿಪಾಲಕರೋ ಅವರು ಈ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಛತ್ತೀಸ್ಗಢ ಮತ್ತು ಉತ್ತರಾಖಂಡ್ನಲ್ಲಿ ನಡೆದ ಧರ್ಮ ಸಂಸದ್ ಸಮಾರಂಭಗಳು ದೊಡ್ಡಮಟ್ಟದ ವಿವಾದ ಸೃಷ್ಟಿಸಿದ್ದವು. ಛತ್ತೀಸ್ಗಢ್ನಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಮಾತನಾಡಿ, ಹಿಂದು ಧಾರ್ಮಿಕ ನಾಯಕ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ, ಗಾಂಧಿಯ ಬಗ್ಗೆ ಅವಹೇಳನ ಮಾಡಿದ್ದರು. ಗಾಂಧಿ ಹತ್ಯೆ ಮಾಡಿದ್ದ ಗೋಡ್ಸೆಯನ್ನು ಶ್ಲಾಘಿಸಿದ್ದರು. ಬಳಿಕ ಅವರ ಬಂಧನವಾಗಿ, ಬಿಡುಗಡೆಯಾಗಿದೆ. ಇನ್ನೊಂದು ಧರ್ಮ ಸಂಸದ್ ಉತ್ತರಾಖಂಡ್ನ ಹರಿದ್ವಾರದಲ್ಲಿ ಡಿಸೆಂಬರ್ 17ರಿಂದ 19ರವರೆಗೆ ನಡೆದಿತ್ತು. ಇದರಲ್ಲಿ ಮುಸ್ಲಿಮರ ವಿರುದ್ಧ ಕತ್ತಿ ಹಿಡಿಯಿರಿ ಎಂಬ ಪ್ರಚೋದನಾತ್ಮಕ ಭಾಷಣವನ್ನು ಮಾಡಲಾಗಿತ್ತು. ಹೀಗೆ ಭಾಷಣ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಧರ್ಮ ಸಂಸದ್ನಲ್ಲಿ ಹಿಂದುತ್ವದ ಹೆಸರಲ್ಲಿ ನೀಡಲಾದ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ. ಹಿಂದು ಸಮುದಾಯದ ಜನರು ಒಟ್ಟಾದಾಗ, ಒಂದು ಕಡೆ ಸೇರಿದಾಗ ಭಗವದ್ಗೀತೆ ಬಗ್ಗೆ ಮಾತನಾಡಬೇಕೇ ಹೊರತು, ಇನ್ನೊಬ್ಬರನ್ನು ಹತ್ಯೆ ಮಾಡುವ, ಮತ್ತೊಂದು ಸಮುದಾಯಕ್ಕೆ ಹಾನಿ ಮಾಡುವ ಮಾತುಗಳನ್ನಾಡಬಾರದು ಎಂದು ವೀರ ಸಾವರ್ಕರ್ ಅವರೇ ಹೇಳಿದ್ದರು ಎಂದು ಮೋಹನ್ ಭಾಗ್ವತ್ ಹೇಳಿದರು. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಮಾತುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಆದರೆ ಇದನ್ನು ಹಿಂದು ರಾಷ್ಟ್ರವನ್ನಾಗಿ ಮಾಡುವ ಕೆಲಸವಲಿಲ್ಲ. ಯಾರು ಒಪ್ಪಲಿ, ಬಿಡಲಿ ಭಾರತ ಯಾವಾಗಲೂ ಹಿಂದೂ ರಾಷ್ಟ್ರವೇ ಆಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಏಕೀಕರಣಕ್ಕೆ ಏಕರೂಪತೆಯ ಅಗತ್ಯವಿಲ್ಲ. ದೇಶದಲ್ಲಿರುವ ವಿವಿಧತೆಯನ್ನು ಪ್ರತ್ಯೇಕತೆ ಎಂದು ಭಾವಿಸಬಾರದು. ವಿವಿಧತೆಗೂ ಪ್ರತ್ಯೇಕತೆಗೂ ತುಂಬ ವ್ಯತ್ಯಾಸವಿದೆ ಎಂದೂ ಮೋಹನ್ ಭಾಗವತ್ ತಿಳಿಸಿದರು.
ಇದನ್ನೂ ಓದಿ: ಉಪಹಾರ ಸೇವಿಸುತ್ತಿದ್ದ ವೇಳೆ ಹೃದಯಾಘಾತ; 25 ವರ್ಷದ ಕಾನೂನು ವಿದ್ಯಾರ್ಥಿ ಸಾವು
Published On - 9:55 am, Mon, 7 February 22