ವೈನ್ ನೀತಿ ವಿರುದ್ಧ ಉಪವಾಸ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸಿಎಂಗೆ ಎಚ್ಚರಿಕೆ ಪತ್ರ ಬರೆದ ಅಣ್ಣಾ ಹಜಾರೆ
ಸೂಪರ್ ಮಾರ್ಕೆಟ್ ಮತ್ತು ವಾಕ್-ಇನ್ ಶಾಪ್‌ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಜ್ಞಾಪನಾ ಪತ್ರ (reminder’ letter) ಬರೆದಿದ್ದಾರೆ. ಸೂಪರ್ ಮಾರ್ಕೆಟ್ ಮತ್ತು ವಾಕ್-ಇನ್ ಶಾಪ್‌ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಹೇಳಿದ್ದಾರೆ. ವೈನ್ ನೀತಿಯನ್ನು ವಿರೋಧಿಸಿ ಫೆಬ್ರವರಿ 3 ರಂದು ಸಿಎಂಗೆ ಈ ಮೊದಲು ಪತ್ರ ಕಳುಹಿಸಿದ್ದೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಾನು ಜ್ಞಾಪನಾ ಪತ್ರವನ್ನು ಕಳುಹಿಸುತ್ತಿದ್ದೇನೆ. ರಾಜ್ಯ ಸರ್ಕಾರ ಇತ್ತೀಚೆಗೆ ಸೂಪರ್ಮಾರ್ಕೆಟ್ ಮತ್ತು ದಿನಸಿ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಈ ನಿರ್ಧಾರವು ರಾಜ್ಯದ ದುರದೃಷ್ಟಕರ ಮತ್ತು ಮುಂದಿನ ಪೀಳಿಗೆಗೆ ಅಪಾಯಕಾರಿಯಾಗಿದೆ. ಈ ನಿರ್ಧಾರವನ್ನು ವಿರೋಧಿಸಲು, ನಾನು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದೆ. ಈ ಕುರಿತು ನಾನು ಸಿಎಂ ಮತ್ತು ಉಪ ಮುಖ್ಯಮಂತ್ರಿ (ಅಜಿತ್ ಪವಾರ್) ಅವರಿಗೆ ಪತ್ರ ಕಳುಹಿಸಿದ್ದೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ವೈನ್ ಮಾರಾಟದ ನಿರ್ಧಾರದ ವಿರುದ್ಧ ಮಹಾರಾಷ್ಟ್ರದಲ್ಲಿ ಏಕಕಾಲದಲ್ಲಿ ಆಂದೋಲನ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ವೈನ್ ಮದ್ಯವಲ್ಲ:
ಮಹಾರಾಷ್ಟ್ರದಲ್ಲಿನ ಸೂಪರ್‌ಮಾರ್ಕೆಟ್‌ಗಳು ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut) ಹೇಳಿದ್ದಾರೆ. ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಇದರ ಲಾಭ ಸಿಗಲಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ಸಂಜಯ್ ರಾವತ್ ಈ ಹಿಂದೆ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮತ್ತು ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ಮಾರ್ಕೆಟ್ಗಳು ಮತ್ತು ಮಳಿಗೆಗಳು “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಬಹುದು. ಪೂಜಾ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಮೀಪವಿರುವ ಸೂಪರ್‌ಮಾರ್ಕೆಟ್‌ಗಳಿಗೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ. ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈನ್ ಮಾರಾಟಕ್ಕೂ ಅವಕಾಶವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು.
ಇದನ್ನೂ ಓದಿ:
ವೈನ್ ಮದ್ಯವಲ್ಲ; ಸೂಪರ್ ಮಾರ್ಕೆಟ್ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರದ ನಡೆಗೆ ಸಂಜಯ್ ರಾವತ್ ಸಮರ್ಥನೆ