ಜೆಲುಸಿಲ್ ಮಾದರಿಯ ಡೈಜೀನ್ ಜೆಲ್ ಬಳಸುತ್ತಿದ್ದೀರಾ? ತತ್​ಕ್ಷಣವೇ ನಿಲ್ಲಿಸಿ; ಸರ್ಕಾರದಿಂದ ಹೊರಟ ಈ ಪ್ರಕಟಣೆ ಗಮನಿಸಿ

|

Updated on: Sep 06, 2023 | 4:10 PM

Stop Taking Digene Gel: ಆ್ಯಸಿಡಿಟಿ ಸಮಸ್ಯೆಗೆ ನೀಡಲಾಗುವ ಡೈಜೀನ್ ಜೆಲ್ ಅನ್ನು ನೀವು ಹೊಂದಿದ್ದರೆ ಹುಷಾರಾಗಿರಿ. ಆ ಔಷಧ ಅಬಾಟ್ ಇಂಡಿಯಾದ ಗೋವಾ ಘಟಕದಲ್ಲಿ ತಯಾರಾಗಿದ್ದರೆ ಕೂಡಲೇ ಅದನ್ನು ಹಿಂದಿರುಗಿಸಿ. ಡೈಜೀನ್ ಜೆಲ್ ಔಷಧವೊಂದರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗೋವಾ ಘಟಕದಲ್ಲಿ ತಯಾರಾದ ಎಲ್ಲಾ ರೀತಿಯ ಡೈಜೀನ್ ಜೆಲ್ ಬಾಟಲ್​ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಅಬಾಟ್ ಇಂಡಿಯಾ ನಿರ್ಧರಿಸಿದೆ.

ಜೆಲುಸಿಲ್ ಮಾದರಿಯ ಡೈಜೀನ್ ಜೆಲ್ ಬಳಸುತ್ತಿದ್ದೀರಾ? ತತ್​ಕ್ಷಣವೇ ನಿಲ್ಲಿಸಿ; ಸರ್ಕಾರದಿಂದ ಹೊರಟ ಈ ಪ್ರಕಟಣೆ ಗಮನಿಸಿ
ಡೈಜೀನ್ ಜೆಲ್
Follow us on

ನವದೆಹಲಿ, ಸೆಪ್ಟೆಂಬರ್ 6: ಆ್ಯಸಿಡಿಟಿ (Acidity) ಸಮಸ್ಯೆಯಾದರೆ ಹಲವು ರೀತಿಯ ಔಷಧಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ನೀವು ಡೈಜೀನ್ ಜೆಲ್ (Digene Gel) ಬಳಸುತ್ತಿದ್ದರೆ ಕೂಡಲೇ ನಿಮ್ಮ ಬಾಟಲ್ ಗಮನಿಸಿ. ಅಬಾಟ್ ಕಂಪನಿಯ (Abott India) ಗೋವಾ ಘಟಕದಲ್ಲಿ ಡೈಜೀನ್ ಜೆಲ್ ತಯಾರಾಗಿದ್ದರೆ ಕೂಡಲೇ ಅದರ ಸೇವನೆ ನಿಲ್ಲಿಸಿ. ಈ ಬಾಟಲ್​ನಲ್ಲಿರುವ ಔಷಧದ ವಿರುದ್ಧ ದೂರೊಂದು ಬಂದ ಹಿನ್ನೆಲೆಯಲ್ಲಿ, ಜೆಲ್ ಬಳಕೆಯನ್ನು ನಿಲ್ಲಿಸುವಂತೆ ಡಿಸಿಜಿಐ (Drugs Controller General) ಅದೇಶ ಹೊರಡಿಸಿದೆ.

ಮಿಂಟ್ ಫ್ಲೇವರ್​ನ ಡೈಜೀನ್ ಜೆಲ್​ನ ಎರಡು ಬಾಟಲ್​ಗಳಲ್ಲಿ ಭಿನ್ನ ಬಣ್ಣ ಮತ್ತು ರುಚಿ ಇರುವುದನ್ನು ಗ್ರಾಹಕರೊಬ್ಬರು ಗಮನಿಸಿದ್ದಾರೆ. ಒಂದು ಬಾಟಲ್​ನಲ್ಲಿ ಮಾಮೂಲಿಯ ಸಿಹಿ ರುಚಿ ಮತ್ತು ತೆಳು ಪಿಂಕ್ ಬಣ್ಣ ಇತ್ತು. ಅದೇ ಬ್ಯಾಚ್​ನ ಮತ್ತೊಂದು ಬಾಟಲ್​ನಲ್ಲಿ ಜೆಲ್​ನ ಬಣ್ಣ ಬಿಳಿಯದ್ದಾಗಿತ್ತು, ರುಚಿ ಕಹಿಯಾಗಿತ್ತು. ವಾಸನೆಯೂ ಬೇರೆ ರೀತಿಯಲ್ಲಿತ್ತು ಎಂದು ಆ ಗ್ರಾಹಕ 2023ರ ಆಗಸ್ಟ್ 11ರಂದು ದೂರು ಕೊಟ್ಟಿದ್ದರು.

ಇದನ್ನೂ ಓದಿ: Personal Hygiene: ನಿಮ್ಮ ಈ ಕೆಲವೊಂದು ವೈಯಕ್ತಿಕ ಬಳಕೆ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ;ಸೋಂಕುಗಳು ಹರಡಬಹುದು

ಗೋವಾದ ಸಾಲ್ಸೆಟ್ಟೆಯ ವರ್ನಾ ಇಂಡಸ್ಟ್ರಿಯನ್ ಎಸ್ಟೇಟ್​ನಲ್ಲಿರುವ ಅಬಾಟ್ ಇಂಡಿಯಾ ಲಿ ಸಂಸ್ಥೆಯ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​​ನಲ್ಲಿ ಈ ಡೈಜೀನ್ ಜೆಲ್ ಬಾಟಲ್​ಗಳನ್ನು ತಯಾರಿಸಲಾಗಿತ್ತು. ಈ ದೂರು ಬಂದ ಬೆನ್ನಲ್ಲೇ ಅಬಾಟ್ ಇಂಡಿಯಾ ತನ್ನ ಆ ಗೋವಾ ಘಟಕದಲ್ಲಿ ತಯಾರಾಗಿ ಮಾರುಕಟ್ಟೆಗೆ ಕಳುಹಿಸಲಾದ ಎಲ್ಲಾ ರೀತಿಯ ಡೈಜೀನ್ ಜೆಲ್ ಔಷಧವನ್ನು ಹಿಂಪಡೆದುಕೊಳ್ಳುವುದಾಗಿ ಘೋಷಿಸಿದೆ. ಮಿಂಟ್, ಆರೆಂಜ್ ಇತ್ಯಾದಿ ಎಲ್ಲಾ ಫ್ಲೇವರ್​ಗಳ ಯಾವುದೇ ಡೈಜೀನ್ ಜೆಲ್​ಗಳು ಇದರಲ್ಲಿ ಸೇರಿವೆ.

ವೈದ್ಯರು ತಮ್ಮ ರೋಗಿಗಳಿಗೆ ಸದ್ಯಕ್ಕೆ ಡೈಜೀನ್ ಜೆಲ್ ಅನ್ನು ಪ್ರಿಸ್ಕ್ರೈಬ್ ಮಾಡಬಾರದು ಎಂದು ಡಿಸಿಜಿಐ ಹೇಳಿದೆ. ಹಾಗೆಯೇ, ಮೆಡಿಕಲ್ ಸ್ಟೋರ್​ಗಳು ತಮ್ಮಲ್ಲಿ ಡೈಜೀನ್ ಜೆಲ್ ಬಾಟಲಿಗಳನ್ನು ಹೊಂದಿದ್ದರೆ ಅದನ್ನು ಅಬಾಟ್ ಇಂಡಿಯಾ ಕಂಪನಿಗೆ ಮರಳಿಸಬೇಕೆಂದೂ ಸೂಚಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರು, ಇಲಾಖೆಗಳ ಅಕ್ರಮಗಳ ಬಗ್ಗೆ ರಹಸ್ಯ ದೂರು ನೀಡಲು ಇದೆ ಅವಕಾಶ; ಹೇಗೆಂಬ ವಿವರ ಇಲ್ಲಿದೆ ನೋಡಿ

ಹೈದರಾಬಾದ್​ನ ವೈದ್ಯ ಡಾ. ಸುಧೀರ್ ಕುಮಾರ್ ಎಂಬುವವರು ಡಿಸಿಜಿಐನ ಈ ಆದೇಶಪತ್ರದ ಪ್ರತಿಯನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ. ಗೋವಾ ಘಟಕದಲ್ಲಿ ತಯಾರಾದ ಡೈಜೀನ್ ಜೆಲ್ ಅನ್ನು ಯಾವ ರೋಗಿಗಳು ಬಳಸಬಾರದು ಎಂದು ಮನವಿ ಮಾಡಿದ್ದಾರೆ.


ಅಬಾಟ್ ಇಂಡಿಯಾ ಸಂಸ್ಥೆ ಭಾರತದಲ್ಲಿ ಎರಡು ತಯಾರಕಾ ಘಟಕಗಳನ್ನು ಹೊಂದಿದೆ. ಗೋವಾದಲ್ಲಿ ಬಿಟ್ಟರೆ ಹಿಮಾಚಲಪ್ರದೇಶ ಬಡ್ಡಿ ಎಂಬಲ್ಲಿ ಇನ್ನೊಂದು ಪ್ಲಾಂಟ್ ಇದೆ. ಸದ್ಯ ಡೈಜೀನ್ ಜೆಲ್ ಸಮಸ್ಯೆ ಆಗಿರುವುದು ಗೋವಾ ಘಟಕದಲ್ಲಿ. ಹಿಮಾಚಲದ ಘಟಕದಲ್ಲಿ ತಯಾರಾಗಿರುವ ಡೈಜೀನ್ ಜೆಲ್ ಬಳಸಲು ಅಡ್ಡಿ ಇಲ್ಲ. ಆ್ಯಸಿಡಿಟಿಗೆ ಕೊಡಲಾಗುವ ಇತರ ಕಂಪನಿಗಳ ಉತ್ಪನ್ನಗಳಾದ ಜೆಲುಸಿಲ್ ಇತ್ಯಾದಿಯನ್ನೂ ಬಳಸಲಡ್ಡಿ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ