ದೆಹಲಿ: ಸದ್ಯಕ್ಕಂತೂ ಕೊರೊನಾದ ಒಮಿಕ್ರಾನ್ ರೂಪಾಂತರ ಭೀತಿ ಜಗತ್ತಿಗೆ ಆವರಿಸಿದೆ. ಪ್ರತಿದಿನ ಇದರ ವ್ಯಾಪ್ತಿ ಹೆಚ್ಚುತ್ತಿದ್ದು, ಹಲವು ದೇಶಗಳು ಈ ಒಮಿಕ್ರಾನ್ ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಲ್ಲಿಯವರೆಗೆ ಅತ್ಯಂತ ಅಪಾಯಕಾರಿಯೆನಿಸಿದ್ದ ಡೆಲ್ಟಾ ವೈರಾಣುಗಿಂತಲೂ ಇದು ಅಪಾಯ ಎಂದು ಹೇಳಲಾಗುತ್ತಿದೆ. ಆದರೆ ಈ ಹೊಸ ರೂಪಾಂತರದ ಹರಡುವಿಕೆ ತೀವ್ರಗತಿಯಲ್ಲಿದೆ, ಇದು ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಹಾನಿ ಉಂಟು ಮಾಡುತ್ತದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಕೆಲವು ಅಧ್ಯಯನಗಳ ಬಳಿಕವಷ್ಟೇ ಇದು ಗೊತ್ತಾಗಲಿದೆ. ಒಂದೇ ಸಲ ಯಾವುದೇ ತೀರ್ಮಾನಕ್ಕೂ ಬರಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಮಿಕ್ರಾನ್ ಜಾಗತಿಕವಾಗಿ ಹರಡುತ್ತಿರುವ ಬಗ್ಗೆ ಕಳವಳ ಶುರುವಾಗಿದೆ.
ಒಮಿಕ್ರಾನ್ ಬಗ್ಗೆ ಡಬ್ಲ್ಯೂಎಚ್ಒ ಹೇಳೋದೇನು?
ಕೊವಿಡ್ 19 ನ ಹಲವು ರೂಪಾಂತರಗಳು ಸದ್ಯಕ್ಕೆ ಜಾಗತಿಕವಾಗಿ ಕಾಡುತ್ತಿವೆ. ಆ ಎಲ್ಲ ರೂಪಾಂತರಿ ತಳಿಗಳಿಗಿಂತ ಒಮಿಕ್ರಾನ್ ಸೋಂಕು ಮತ್ತು ಅದರ ಲಕ್ಷಣಗಳು ವಿಭಿನ್ನ ಎಂದು ಹೇಳಲು ಸದ್ಯಕ್ಕಂತೂ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಈ ಒಮಿಕ್ರಾನ್ ಬಗ್ಗೆ ಇನ್ನಷ್ಟು ಅಧ್ಯಯನ, ವಿಮರ್ಶೆಗಳು ಅಗತ್ಯವಿದ್ದು, ಅದಕ್ಕೆ ಕೆಲವು ದಿನಗಳು ಅಥವಾ ವಾರಗಳೇ ಬೇಕಾಗಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸದ್ಯ ಕೊವಿಡ್ 19 ನಿಂದ ಉಂಟಾಗಿರುವ ಡೆಲ್ಟಾ ಸೇರಿ ಎಲ್ಲ ರೂಪಾಂತರ ತಳಿಗಳು ಸಾವನ್ನು ಉಂಟು ಮಾಡುವಷ್ಟು ಪ್ರಬಲವಾಗಿವೆ. ಹಾಗಾಗಿ ಒಮಿಕ್ರಾನ್ನ್ನು ನಿರ್ಲಕ್ಷಿಸಬಾರದು. ಪ್ರಾಥಮಿಕವಾಗಿ ಈ ಸೋಂಕಿನ ಬಗ್ಗೆ ನಡೆದ ಅಧ್ಯಯನದಲ್ಲಿ, ಒಮಿಕ್ರಾನ್ ಮರು ಸೋಂಕಿಗೆ ಕಾರಣವಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದರೆ ಈ ಹಿಂದೆ ಕೊವಿಡ್ 19 ಸೋಂಕಿಗೆ ಒಳಗಾದವರು ಕೂಡ ಮತ್ತೆ ಈ ಒಮಿಕ್ರಾನ್ಗೆ ಒಳಗಾಗಬಹುದು.
ಈಗಿರುವ ಪಿಸಿಆರ್ ಟೆಸ್ಟ್ನಿಂದಲೇ ಒಮಿಕ್ರಾನ್ ಸೋಂಕನ್ನು ಪತ್ತೆ ಮಾಡಬಹುದು. ಹಾಗಿದ್ದಾಗ್ಯೂ ಈಗಿರುವ ಕೊವಿಡ್ 19 ಲಸಿಕೆಗಳೇ ಒಮಿಕ್ರಾನ್ ನಿಯಂತ್ರಿಸಬಹುದಾ ಎಂಬುದಕ್ಕೆ ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ ಎಂದು ಡಬ್ಲ್ಯೂಎಚ್ಒ ಹೇಳಿದೆ. ಹಾಗೇ, ಒಮಿಕ್ರಾನ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್ ಶರ್ಮಾ
Published On - 9:47 am, Mon, 29 November 21