ಭಾರತದ ರಾಷ್ಟ್ರಗೀತೆಯನ್ನು ಬದಲಿಸುವಂತೆ ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.
ಈಗಿರುವ ರಾಷ್ಟ್ರಗೀತೆ 1947ರ ನಂತರದ ಭಾರತಕ್ಕೆ ಸರಿ ಹೊಂದುವುದಿಲ್ಲ
ರವೀಂದ್ರನಾಥ ಠಾಗೋರ್ ರಚಿಸಿರುವ ರಾಷ್ಟ್ರಗೀತೆ ಸ್ವಾತಂತ್ಯೋತ್ತರ ಭಾರತಕ್ಕೆ ಸರಿಹೊಂದುವುದಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರಗೀತೆಯಲ್ಲಿ ಬರುವ ಸಿಂಧ್ ಪ್ರಾಂತ್ಯ ಭಾರತದಲ್ಲಿ ಈಗ ಇಲ್ಲವೇ ಇಲ್ಲ. ಮೇಲಾಗಿ ಈ ಗೀತೆ ಯಾರನ್ನು ಉದ್ದೇಶಿಸಿ ರಚಿಸಲ್ಪಟ್ಟಿದೆ ಎಂಬ ಗೊಂದಲವೂ ಇದೆ. ಹೀಗಾಗಿ ಇದನ್ನು ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.
My letter to PM Modi on Jana Gana Mana pic.twitter.com/qc1KnLDb2g
— Subramanian Swamy (@Swamy39) December 1, 2020
ಭಾರತೀಯ ಸೇನೆ ಸಂಯೋಜಿಸಿ ಹಾಡಿದ ಗೀತೆಯನ್ನು ರಾಷ್ಟ್ರಗೀತೆ ಮಾಡಿ
‘ಜನ ಗಣ ಮನ’ ಗೀತೆಯ ಬದಲು 1943ರ ಅಕ್ಟೋಬರ್ 24ರಂದು ಭಾರತೀಯ ಸೇನೆಯು ಸಂಯೋಜಿಸಿ ಹಾಡಿರುವ ಗೀತೆಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಈಗಿರುವ ಗೀತೆಗಿಂತ, ಸೇನೆ ಹಾಡಿರುವ ಗೀತೆಯೇ ಹೆಚ್ಚು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರಗೀತೆ ಬದಲಾಗಲಿ
ಇದರೊಂದಿಗೆ ‘ಜನ ಗಣ ಮನ’ವನ್ನು ಕಾಲಕ್ರಮೇಣ ಸೂಕ್ತ ಅರ್ಥ ಬರುವಂತೆ ಬದಲಿಸಬಹುದು ಎಂದು 1949 ನವೆಂಬರ್ 26ರಂದು ಡಾ. ರಾಜೇಂದ್ರ ಪ್ರಸಾದ್ ಹೇಳಿದ ಮಾತನ್ನು ಉಲ್ಲೇಖಿಸಿರುವ ಸುಬ್ರಮಣಿಯನ್ ಸ್ವಾಮಿ 2021ರ ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಬದಲಿಸಿ ಎಂದು ಪತ್ರದ ಮೂಲಕ ಕೋರಿದ್ದಾರೆ.
ಈ ಹಿಂದೆ ರಾಷ್ಟ್ರಗೀತೆಯಿಂದ ಸಿಂಧ್ ಪದವನ್ನು ಕೈ ಬಿಡಲು ಮನವಿ ಮಾಡಲಾಗಿತ್ತು
2016ರಲ್ಲಿ ಕೇಂದ್ರ ಸಚಿವ ಅರವಿಂದ ಸಾವಂತ್ ರಾಷ್ಟ್ರಗೀತೆಯಿಂದ ಸಿಂಧ್ ಪದವನ್ನು ಕೈ ಬಿಡುವಂತೆ ಆಗ್ರಹಿಸಿದ್ದರು. ಆದರೆ, ಸಿಂಧಿ ಸಮುದಾಯದವರು ಸಿಂಧ್ ಪಾಕಿಸ್ತಾನದ ಪಾಲಾದರೂ ನಾವು ಭಾರತೀಯರಾಗಿಯೇ ಉಳಿದಿದ್ದೇವೆ. ಆದ್ದರಿಂದ ಸಿಂಧ್ ಪದವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರ ಫಲವಾಗಿ ಬದಲಾವಣೆ ಆಗಿರಲಿಲ್ಲ.
Published On - 5:50 pm, Wed, 2 December 20