ಒಬಿಸಿ ಕ್ರೀಮಿ ಲೇಯರ್ ಸ್ಥಾನಮಾನವನ್ನು ಪೋಷಕರ ವೇತನ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ

ಇತರ ಹಿಂದುಳಿದ ವರ್ಗಗಳ (ಒಬಿಸಿ) ಕ್ರೀಮಿ ಲೇಯರ್ ಅರ್ಹತೆಯನ್ನು ಕೇವಲ ಪೋಷಕರ ವೇತನ ಅಥವಾ ಆದಾಯದ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ ಎಂಬ ತನ್ನ ಮಾರ್ಚ್ 11ರ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪುನರುಚ್ಚರಿಸಿದೆ. ಅಷ್ಟೇ ಅಲ್ಲದೆ, ಈ ತೀರ್ಪನ್ನು ಜಾರಿಗೆ ತರಲು ತನಗೆ 2 ವರ್ಷಗಳ ಕಾಲಾವಕಾಶ ಬೇಕು ಎಂಬ ಕೇಂದ್ರ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ಈ ತೀರ್ಪಿನ ಜಾರಿಯನ್ನು ಮುಂದೂಡಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದರ ಜಾರಿಗೆ 8 ವಾರಗಳ ಅಂತಿಮ ಗಡುವು ನೀಡಿದೆ.

ಒಬಿಸಿ ಕ್ರೀಮಿ ಲೇಯರ್ ಸ್ಥಾನಮಾನವನ್ನು ಪೋಷಕರ ವೇತನ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ
ಸುಪ್ರೀಂ ಕೋರ್ಟ್‌
Image Credit source: PTI

Updated on: Nov 06, 2026 | 5:17 PM

ನವದೆಹಲಿ, ನವೆಂಬರ್ 6: ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಸಂಬಂಧಿಸಿದಂತೆ ಕ್ರೀಮಿ ಲೇಯರ್ ವ್ಯಾಪ್ತಿಯನ್ನು ನಿರ್ಧರಿಸುವಾಗ ಪೋಷಕರ ವೇತನ ಮತ್ತು ಕೃಷಿ ಆದಾಯವನ್ನು ಒಟ್ಟು ಆದಾಯದ ಮಿತಿಯಲ್ಲಿ ಸೇರಿಸಬಾರದು ಎಂಬ ತನ್ನ ಹಳೆಯ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ನಿಯಮದ ಮರುಪರಿಶೀಲನೆಗೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಒಬಿಸಿ ಮೀಸಲಾತಿಯ ಲಾಭ ಪಡೆಯಲು ಕ್ರೀಮಿ ಲೇಯರ್ ಆದಾಯದ ಮಿತಿ ಲೆಕ್ಕಾಚಾರ ಮಾಡುವಾಗ ಸರ್ಕಾರಿ ಅಥವಾ ಖಾಸಗಿ ನೌಕರರಾಗಿರುವ ಪೋಷಕರ ಮೂಲ ವೇತನವನ್ನು ಹೊರತುಪಡಿಸುವ ನಿಯಮವು ಮುಂದುವರಿಯಲಿದೆ.

ಒಬಿಸಿ ಕ್ರೀಮಿ ಲೇಯರ್ ನಿರ್ಧರಿಸಲು 8 ಲಕ್ಷ ರೂ. ಆದಾಯ ಮಿತಿಯನ್ನು ಲೆಕ್ಕಾಚಾರ ಮಾಡುವಾಗ ಪೋಷಕರ ವೇತನ ಆದಾಯವನ್ನು ಸೇರಿಸಬೇಕು ಎಂಬ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ವಿಚಾರದಲ್ಲಿ ನೀಡಲಾಗಿದ್ದ ಹಳೆಯ ತೀರ್ಪಿನಲ್ಲಿ ಯಾವುದೇ ಕಾನೂನಾತ್ಮಕ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು ಕೇಂದ್ರದ ಅರ್ಜಿಯನ್ನು ತಳ್ಳಿಹಾಕಿದೆ.

Loading...

ಇದನ್ನೂ ಓದಿ: ವಿಪಕ್ಷದ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ; ಎಸ್‌ಐಆರ್ ಪರ ಸುಪ್ರೀಂ ಕೋರ್ಟ್​ನಲ್ಲಿ ಸರ್ವಾನುಮತದ ಸಮರ್ಥನೆ

ಕ್ರೀಮಿ ಲೇಯರ್ ಲೆಕ್ಕಾಚಾರ ಮಾಡುವಾಗ ‘ಇತರ ಮೂಲಗಳ ಆದಾಯ’ವನ್ನು (ವ್ಯಾಪಾರ, ಹೂಡಿಕೆ, ಆಸ್ತಿ ಇತ್ಯಾದಿ) ಮಾತ್ರ ಪರಿಗಣಿಸಬೇಕೇ ಹೊರತು, ಪೋಷಕರು ಪಡೆಯುವ ವೇತನ ಮತ್ತು ಕೃಷಿಯಿಂದ ಬರುವ ಆದಾಯವನ್ನು ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಕ್ರೀಮಿ ಲೇಯರ್ ತತ್ವವು ಕೇವಲ ಆರ್ಥಿಕ ಸ್ಥಿತಿಯನ್ನು ಮಾತ್ರ ಆಧರಿಸಿಲ್ಲ, ಬದಲಿಗೆ ಸಾಮಾಜಿಕ ಮತ್ತು ಉದ್ಯೋಗಿಕ ಸ್ಥಾನಮಾನವನ್ನು ಆಧರಿಸಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

 

2025ರ ಸಿವಿಲ್ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದರೂ, ಅಭ್ಯರ್ಥಿಗಳಿಗೆ ಹುದ್ದೆಗಳ ಹಂಚಿಕೆ ಪ್ರಕ್ರಿಯೆ ಇನ್ನೂ ಬಾಕಿಯಿದೆ. ಹೀಗಾಗಿ, ಪ್ರಸ್ತುತ ಹಂಚಿಕೆ ಪ್ರಕ್ರಿಯೆಗೆ ಮಾರ್ಚ್ 11ರ ತೀರ್ಪಿನಲ್ಲಿ ನೀಡಲಾದ ಕ್ರೀಮಿ ಲೇಯರ್ ನಿಯಮವೇ ಅನ್ವಯವಾಗಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಹಳೆಯ ನೇಮಕಾತಿಗಳನ್ನು ಮರುಪರಿಶೀಲಿಸುವಂತಿಲ್ಲ:

ಮಾರ್ಚ್ 11ರ ತೀರ್ಪಿಗಿಂತ ಮೊದಲು ಪೂರ್ಣಗೊಂಡಿರುವ ನೇಮಕಾತಿಗಳು ಅಥವಾ ಆಯ್ಕೆ ಪ್ರಕ್ರಿಯೆಗಳನ್ನು ಈ ತೀರ್ಪಿನ ಆಧಾರದ ಮೇಲೆ ಮರುಪರಿಶೀಲಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಪ್ರಸ್ತುತ ಕೋರ್ಟ್ ಅಥವಾ ಟ್ರಿಬ್ಯೂನಲ್‌ನಲ್ಲಿ ವಿಚಾರಣೆಯಲ್ಲಿರುವ ಬಾಕಿ ಪ್ರಕರಣಗಳನ್ನು ಆಯಾ ಸಂಸ್ಥೆಗಳು ಕಾನೂನು ಪ್ರಕಾರ ಇತ್ಯರ್ಥಪಡಿಸಬಹುದು.

ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆ ಕಾಯ್ದೆ ಮರುಪರಿಶೀಲನೆ; ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಲಕ್ಷಾಂತರ ಒಬಿಸಿ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರಿ ಸಮಾಧಾನ ಸಿಕ್ಕಂತಾಗಿದೆ. ಪೋಷಕರು ಉದ್ಯೋಗದಲ್ಲಿದ್ದು ವೇತನ ಪಡೆಯುತ್ತಿದ್ದರೂ, ಇತರ ಮೂಲಗಳ ಆದಾಯವು ನಿಗದಿತ ಮಿತಿಯಲ್ಲಿದ್ದರೆ (8 ಲಕ್ಷ ರೂ.) ಅಂತಹ ಅಭ್ಯರ್ಥಿಗಳು ಒಬಿಸಿ ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರವನ್ನು ಪಡೆದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us