ದೆಹಲಿ: ದೇಶದ ವಿವಿಧ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ನ ಸಮರ್ಪಕ ಮತ್ತು ತ್ವರಿತ ಪೂರೈಕೆಗಾಗಿ 12 ಸದಸ್ಯರ ರಾಷ್ಟ್ರೀಯ ಟಾಸ್ಕ್ಫೋರ್ಸ್ನ್ನು ಸುಪ್ರೀಂಕೋರ್ಟ್ ರಚಿಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ಈ ಟಾಸ್ಕ್ಫೋರ್ಸ್ನ ನೇತೃತ್ವ ವಹಿಸಲಿದ್ದು, ಬೆಂಗಳೂರಿನ ಡಾ.ದೇವಿ ಪ್ರಸಾದ್ ಶೆಟ್ಟಿ ಅವರಿಗೂ ಟಾಸ್ಕ್ಫೋರ್ಸ್ನಲ್ಲಿ ಸ್ಥಾನ ಲಭಿಸಿದೆ. ದೇಶಾದ್ಯಂತ ಆಕ್ಸಿಜನ್, ಡ್ರಗ್ಸ್ ಹಂಚಿಕೆಯ ಉಸ್ತುವಾರಿಯನ್ನು ಈ ಟಾಸ್ಕ್ಫೋರ್ಸ್ ನಿಭಾಯಿಸಲಿದೆ.
ಸುಪ್ರೀಂಕೋರ್ಟ್ನ ನ್ಯಾಯಾಧೀಶರು ಈ ಟಾಸ್ಕ್ಫೋರ್ಸ್ ರಚಿಸುವ ಮುನ್ನ ಪ್ರತಿ ಸದಸ್ಯರ ಬಳಿಯೂ ವೈಯಕ್ತಿಕವಾಗಿ ಮಾತನಾಡಿದ್ದಾರೆ. ತದನಂತರವೇ ಪ್ರತಿ ಸದಸ್ಯರನ್ನೂ ಟಾಸ್ಕ್ಫೋರ್ಸ್ಗೆ ನೇಮಿಸಿದ್ದಾರೆ ಎಂದು ಹೇಳಲಾಗಿದೆ. ಟಾಸ್ಫೋರ್ಸ್ನ ಎಲ್ಲ ಸದಸ್ಯರೂ ಯಾರ ಮಧ್ಯಪ್ರವೇಶವೂ ಇಲ್ಲದೇ, ತಮ್ಮ ವರದಿಯನ್ನು ನೇರವಾಗಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಿದ್ದಾರೆ. ಇನ್ನು ಒಂದೇ ವಾರದಲ್ಲಿ ಟಾಸ್ಕ್ಫೋರ್ಸ್ ತನ್ನ ಕೆಲಸ ಆರಂಭಿಸಲಿದೆ ಎಂದು ವರದಿಯಾಗಿದೆ.
ಟಾಸ್ಕ್ಫೋರ್ಸ್ಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಆಸ್ಪತ್ರೆಗಳೂ ಟಾಸ್ಕ್ಫೋರ್ಸ್ನ ಕೆಲಸ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಪಶ್ಚಿಮ ಬಂಗಾಳದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಬವತೋಶ್ ವಿಶ್ವಾಸ್ ಟಾಸ್ಕ್ಫೋರ್ಸ್ನ ನೇತೃತ್ವ ವಹಿಸಲಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಎಂಡಿ ಡಾ.ನರೇಶ್ ತೆಹ್ರಾನ್, ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಮುಂಬೈನ ಫೋರ್ಟಿಸ್ ಆಸ್ಪತ್ರೆಯ ವೈದ್ಯರುಗಳನ್ನು ಸಹ ಟಾಸ್ಕ್ಫೋರ್ಸ್ ಒಳಗೊಂಡಿದೆ.
ಇಂದು ಟಾಸ್ಕ್ಪೋರ್ಸ್ ರಚಿಸುವ ಮುನ್ನ ನಡೆದ ವಿಚಾರಣೆಯಲ್ಲಿ ದೇಶಕ್ಕೆ ಎದುರಾಗಲಿರುವ ಕೊವಿಡ್ ಮೂರನೇ ಅಲೆಯನ್ನು ತಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಯಾವುದೇ ಕೊವಿಡ್ 19 ಕೇಂದ್ರಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ; ನೀತಿ ಪರಿಷ್ಕರಿಸಿದ ಕೇಂದ್ರ
(supreme court constitutes 12 member committee to look into medical oxygen dr devi prasad shetty also a member from karnataka)
Published On - 5:33 pm, Sat, 8 May 21