ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ಅರ್ಜಿ; ಇಂದು ಸುಪ್ರೀಂಕೋರ್ಟ್​​ ತೀರ್ಪು ಪ್ರಕಟ

ಪೀಠದ ನೇತೃತ್ವದ ನ್ಯಾಯಮೂರ್ತಿ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಈ ವಾರ ಈ ಅರ್ಜಿಗಳ ತೀರ್ಪು ನಿರೀಕ್ಷಿಸಲಾಗಿದೆ

ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ಅರ್ಜಿ; ಇಂದು ಸುಪ್ರೀಂಕೋರ್ಟ್​​ ತೀರ್ಪು ಪ್ರಕಟ
ಪ್ರಾತಿನಿಧಿಕ ಚಿತ್ರ
Edited By:

Updated on: Oct 13, 2022 | 7:09 AM

ದೆಹಲಿ: ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್​​ಗೆ (Hijab) ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ (Supreme Court) ತೀರ್ಪನ್ನು ಗುರುವಾರ ಇಬ್ಬರು ನ್ಯಾಯಾಧೀಶರು ಪ್ರಕಟಿಸುವ ಸಾಧ್ಯತೆ ಇದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದ ನೇತೃತ್ವದ ನ್ಯಾಯಮೂರ್ತಿ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಈ ವಾರ ಈ ಅರ್ಜಿಗಳ ತೀರ್ಪು ನಿರೀಕ್ಷಿಸಲಾಗಿದೆ. ಸುಪ್ರೀಂಕೋರ್ಟ್‌ನ ವಾದದ ಸಮಯದಲ್ಲಿ, ಅರ್ಜಿದಾರರ ಪರ ಹಾಜರಾದ ವಕೀಲರು ಮುಸ್ಲಿಂ ಹುಡುಗಿಯರು ತರಗತಿಗೆ ಹಿಜಾಬ್ ಧರಿಸುವುದನ್ನು ತಡೆಯುವುದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಇದು ಅವರು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಬಹುದು ಎಂದು ಹೇಳಿದ್ದಾರೆ.

ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಫೆಬ್ರುವರಿ 5, 2022 ರ ಆದೇಶವನ್ನು ಒಳಗೊಂಡಂತೆ ಅರ್ಜಿದಾರರರು ವಿವಿಧ ಅಂಶಗಳನ್ನು ಎತ್ತಿದ್ದರು. ಹಿಜಾಬ್‌ನ್ನು ಹಿಂದೂಗಳು ಧರಿಸುವ ಗೂಂಗಟ್ ಅಥವಾ ಬಿಂದಿ ಮತ್ತು ಸಿಖ್ಖರ ಪೇಟಕ್ಕೆ ಹೋಲಿಸಿದ್ದರು.

ಕೆಲವು ವಕೀಲರು ಈ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬೇಕು ಎಂದು ವಾದಿಸಿದರು. ವಿವಾದ ಹುಟ್ಟುಹಾಕಿರುವ ಕರ್ನಾಟಕ ಸರ್ಕಾರದ ಆದೇಶ ಧರ್ಮ ನಿರಪೇಕ್ಷವಾಗಿದೆ ಎಂದು ರಾಜ್ಯದ ಪರ ಹಾಜರಾದ ವಕೀಲರು ವಾದಿಸಿದ್ದರು.

ಮಾರ್ಚ್ 15 ರಂದು, ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು.
ಫೆಬ್ರವರಿ 5, 2022 ರ ರಾಜ್ಯ ಸರ್ಕಾರದ ಆದೇಶವನ್ನು ಕೆಲವು ಮುಸ್ಲಿಂ ಹುಡುಗಿಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

Published On - 9:15 pm, Wed, 12 October 22