ಇಶಾ ಫೌಂಡೇಷನ್​ಗೆ ಬಿಗ್​ ರಿಲೀಫ್​: ಶೋಕಾಸ್‌ ನೋಟಿಸ್‌ ರದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ

ಗುರು ಜಗ್ಗಿ ವಾಸುದೇವ್‌ ನಡೆಸುತ್ತಿರುವ ಈಶಾ ಫೌಂಡೇಶನ್​ಗೆ ಸುಪ್ರೀಂಕೋರ್ಟ್​ ಬಿಗ್ ರಿಲೀಫ್​ ನೀಡಿದೆ. ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಇಶಾ ಫೌಂಡೇಶನ್​ಗೆ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ಮದ್ರಾಸ್ ಹೈಕೋರ್ಟ್​ ರದ್ದುಗೊಳಿಸಿತ್ತು. ಇದೀಗ ಮದ್ರಾಸ್ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಈಗ ಸುಪ್ರೀಂಕೋರ್ಟ್​ ಸಹ ಎತ್ತಿ ಹಿಡಿದೆ.

ಇಶಾ ಫೌಂಡೇಷನ್​ಗೆ ಬಿಗ್​ ರಿಲೀಫ್​: ಶೋಕಾಸ್‌ ನೋಟಿಸ್‌ ರದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ
Isha Foundation
Edited By:

Updated on: Feb 28, 2025 | 10:12 PM

ನವದೆಹಲಿ, (ಫೆಬ್ರವರಿ 28): ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ ನಡೆಸುತ್ತಿರುವ ಇಶಾ ಫೌಂಡೇಶನ್‌ನ ಕೊಯಮತ್ತೂರು ಕ್ಯಾಂಪಸ್‌ನಲ್ಲಿ ನಿರ್ಮಾಣ ಚಟುವಟಿಕೆಗಳ ವಿರುದ್ಧ ನೀಡಲಾಗಿದ್ದ ಶೋಕಾಸ್ ನೋಟಿಸ್ ರದ್ದುಗೊಳಿಸಿ ಮದ್ರಾಸ್ ಹೈಕೋರ್ಟ್‌ 2022ರಲ್ಲಿ ಆದೇಶ ನೀಡಿತ್ತು. ಇದೀಗ ಆ ತೀರ್ಪುನ್ನು ಇಂದು (ಫೆಬ್ರವರಿ 28) ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ. ಇಶಾ ಫೌಂಡೇಷನ್‌ನ ಯೋಗ ಮತ್ತು ಧ್ಯಾನ ಕೇಂದ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್‌ ಕೆ ಸಿಂಗ್ ಅವರ ಪೀಠವು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ (ಟಿಎನ್‌ಸಿಪಿಬಿ) ಸೂಚಿಸಿ ಆದೇಶ ಹೊರಡಿಸಿದೆ.

ಇದೇ ವೇಳೆ, ತಾನು ಎಲ್ಲಾ ಕಾನೂನುಗಳನ್ನು ಪಾಲಿಸುವುದಾಗಿ ಇಶಾ ಫೌಂಡೇಶನ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. ಭವಿಷ್ಯದಲ್ಲಿ ವಿಸ್ತರಣಾ ಚಟುವಟಿಕೆ ಅಗತ್ಯವಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದೆ.

ಕೊಯಮತ್ತೂರಿನಲ್ಲಿ ಇಶಾ ಕೇಂದ್ರದ ಆವರಣದಲ್ಲಿ 2006 ರಿಂದ 2014ರಲ್ಲಿ ಅನುಮತಿ ಪಡೆಯದೆ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಇಶಾ ಫೌಂಡೇಶನ್‌ಗೆ 2021ರಲ್ಲಿ ಶೋಕಾಸ್ ನೋಟಿಸ್ ನೀಡಿತ್ತು. ಇದನ್ನು 2022ರ ಡಿಸೆಂಬರ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ರದ್ದುಪಡಿಸಿತ್ತು.

ಶೋಕಾಸ್‌ ನೋಟಿಸ್‌ ರದ್ದುಪಡಿಸುವ ವೇಳೆ ಮದ್ರಾಸ್ ಹೈಕೋರ್ಟ್ ಇಶಾ ಫೌಂಡೇಶನ್ ಸಾಮೂಹಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು, ಯೋಗ ಕೇಂದ್ರವನ್ನು ನಡೆಸುವುದರಿಂದ, ಅದನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಿರ್ಮಾಣ ಚಟುವಟಿಕೆಗಳಿಗೆ ಪೂರ್ವಭಾವಿ ಅನುಮತಿಯನ್ನು ಕೋರುವ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರವು ನೀಡಿರುವ ವಿನಾಯತಿಗೆ ಅರ್ಹವಾಗಿದೆ ಎಂದು ಹೇಳಿತ್ತು. ಈ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.