
ನವದೆಹಲಿ, ನವೆಂಬರ್ 27: ಹನ್ನೆರಡು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆ ಸುಪ್ರೀಂನಲ್ಲಿ ವಿರೋಧ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ. ‘‘ಎಸ್ಐಆರ್ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ, ಅಗತ್ಯವಿದ್ದರೆ ನಾವು ನ್ಯೂನತೆಗಳನ್ನು ಸರಿಪಡಿಸುತ್ತೇವೆ’’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರವನ್ನು ಅದು ಹೊಂದಿದೆ, ಯಾರೂ ಅದನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ.ಯಾವುದೇ ಸಮಸ್ಯೆಗಳು ಅದರಲ್ಲಿ ಕಂಡು ಬಂದರೆ ನಾವು ಅದನ್ನು ನಿವಾರಿಸುತ್ತೇವೆ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರವಾಗಿ ಚರ್ಚೆಯನ್ನು ಆರಂಭಿಸಿದ ಕಪಿಲ್ ಸಿಬಲ್, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದರು. ಇದಕ್ಕೆ ಪೀಠವು, ಚುನಾವಣಾ ಆಯೋಗವು ಯಾವುದೇ ಪ್ರಶ್ನೆಗಳನ್ನು ಕೇಳದೆ ಫಾರ್ಮ್ 6 ಅನ್ನು ಸ್ವೀಕರಿಸುವ ಅಂಚೆ ಕಚೇರಿಯಲ್ಲ ಎಂದು ಹೇಳಿದೆ. ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಯೋಗವು ಯಾವಾಗಲೂ ಶಾಸನಬದ್ಧ ಅಧಿಕಾರವನ್ನು ಹೊಂದಿರುತ್ತದೆ. ಈ ಬಾರಿ ನಡೆಯುತ್ತಿರುವ ಘಟನೆಗಳು ದೇಶದಲ್ಲಿ ಹಿಂದೆಂದೂ ನಡೆದಿಲ್ಲ ಎಂದು ಸಿಬಲ್ ಹೇಳಿದರು. ಇದು ಹಿಂದೆಂದೂ ಸಂಭವಿಸಿಲ್ಲ ಎಂಬ ಅಂಶವು ಪ್ರಕ್ರಿಯೆಯ ಸಿಂಧುತ್ವವನ್ನು ನಿರ್ಧರಿಸುವ ಮಾನದಂಡವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಸ್‌ಐಆರ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಬಾಕಿ ಉಳಿದಿವೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ವಿಷಯವನ್ನು ವಿಚಾರಣೆ ನಡೆಸುತ್ತಿದೆ. ಒಬ್ಬ ಮತದಾರನಿಗೆ ಗಣತಿ ನಮೂನೆಯನ್ನು ಭರ್ತಿ ಮಾಡಲು ಏಕೆ ಕೇಳಬೇಕು? ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗ ಯಾರು? ಆಧಾರ್ ಕಾರ್ಡ್‌ನಲ್ಲಿ ನಿವಾಸದ ಸ್ಥಳ ಮತ್ತು ಜನ್ಮ ದಿನಾಂಕವನ್ನು ಉಲ್ಲೇಖಿಸಲಾಗಿದೆ, 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಾವು ಭಾರತೀಯ ಪ್ರಜೆಗಳು ಎಂದು ಸ್ವಯಂ ಘೋಷಣೆ ಮಾಡಿದರೆ ಮತದಾರರಾಗಿ ದಾಖಲಾಗಲು ಇದು ಸಾಕಾಗುತ್ತದೆ ಎಂದು ಸಿಬಲ್ ವಾದಿಸಿದರು.
ಮತ್ತಷ್ಟು ಓದಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ
ಬಿಹಾರದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದಂತೆ, ಆರಂಭದಲ್ಲಿ ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹೇಳಲಾಗಿತ್ತು ಎಂದು ಸಿಜೆಐ ಕಾಂತ್ ವಿವರಿಸಿದರು. ಸಿಆರಂಭದಲ್ಲಿ, ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ನಾವು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದೇವೆ. ಅಂತಿಮವಾಗಿ ಏನಾಯಿತೆಂದರೆ ಹೆಸರುಗಳನ್ನು ಅಳಿಸಿದವರಲ್ಲಿ ಮೃತ ವ್ಯಕ್ತಿಗಳು ಮತ್ತು ಸ್ಥಳಾಂತರಗೊಂಡವರು ಸೇರಿದ್ದಾರೆ. ಯಾರೂ ಆಕ್ಷೇಪಿಸಲಿಲ್ಲ. ಇದು ಚುನಾವಣೆ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ